ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 18,466 ಕೋವಿಡ್ ಪ್ರಕರಣಗಳು ಪತ್ತೆ, 20 ಮಂದಿ ಸಾವು
ಮುಂಬೈ(ಜ.05): ದೇಶದಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳ(Corona cases) ಸಂಖ್ಯೆ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸುತ್ತಿದೆ. ಇದು ಮೂರನೇ ಅಲೆ(3rd Wave) ಪ್ರಾರಂಭದ ಮುನ್ಸೂಚನೆ ಎಂದು ತಜ್ಞರು ಹೇಳುತ್ತಿದ್ದಾರೆ. ಮೆಟ್ರೋ ನಗರಗಳಲ್ಲೇ ಕೋವಿಡ್ ಪ್ರಕರಣಗಳ(COVID Cases) ಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತೊಂದು ಆತಂಕಕ್ಕೆ ಕಾರಣವಾಗಿದೆ. ದೆಹಲಿ(Delhi), ಮುಂಬೈ(Mumbai), ಬೆಂಗಳೂರಿನಂತಹ(Bengaluru) ಮಹಾನಗರಿಗಳಲ್ಲಿ ಪ್ರತಿದಿನ ಪತ್ತೆಯಾಗುತ್ತಿರುವ ಕೊರೋನಾ ಕೇಸ್ಗಳಲ್ಲಿ ಏರಿಕೆ ಕಾಣುತ್ತಿದೆ. ದೆಹಲಿಯಲ್ಲಿ ಪಾಸಿಟಿವಿಟಿ ದರ(Positivity Rate) ಶೇ.6 ದಾಟಿದೆ. ಇನ್ನು, ಮಹಾರಾಷ್ಟ್ರ(Maharashtra)ದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.
ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 18,466 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸೋಮವಾರ(12,160)ಕ್ಕೆ ಹೋಲಿಕೆ ಮಾಡಿದರೆ ಶೇ.51 ರಷ್ಟು ಏರಿಕೆಯಾಗಿದೆ. ಮುಂಬೈ ನಗರವೊಂದರಲ್ಲೇ 10,860 ಹೊಸ ಪ್ರಕರಣಗಳು (ಸೋಮವಾರಕ್ಕಿಂತ ಶೇ.34 ರಷ್ಟು ಹೆಚ್ಚು) ಪತ್ತೆಯಾಗಿವೆ.
ಕಳೆದ 24 ಗಂಟೆಯಲ್ಲಿ 20 ಕೋವಿಡ್ ಸಾವು
ಅಂತೆಯೇ, ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 20 ಕೋವಿಡ್ ಸಾವುಗಳು ಸಂಭವಿಸಿವೆ ಎಂದು ವರದಿಯಾಗಿದೆ. ಮುಂಬೈನಲ್ಲಿ ಪತ್ತೆಯಾದ ಹೊಸ ಕೋವಿಡ್ ಪ್ರಕರಣಗಳ ಪೈಕಿ, 834 ಸೋಂಕಿತರಿಗೆ ಆಸ್ಪತ್ರೆಯ ಅಗತ್ಯತೆ ಇದೆ. ಇನ್ನುಳಿದ 54 ಸೋಂಕಿತರಿಗೆ ಮೆಡಿಕಲ್ ಆಕ್ಸಿಜನ್ನ ಅವಶ್ಯಕತೆ ಇದೆ ಎಂದು ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಲಾಗಿದೆ.
ಓಮೈಕ್ರಾನ್ ಭೀತಿ
ಕೊರೋನಾ ವೈರಸ್ನ ಹೊಸ ರೂಪಾಂತರಿ ಓಮೈಕ್ರಾನ್ ಮುಂಬೈ ಸೇರಿ ಇತರೆ ನಗರಗಳಲ್ಲಿ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಓಮೈಕ್ರಾನ್ ಪ್ರಕರಣಗಳು ಸಹ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
653 ಮಂದಿಗೆ ಓಮೈಕ್ರಾನ್
ಮಹಾರಾಷ್ಟ್ರದಲ್ಲಿ ಈವರೆಗೆ 653 ಮಂದಿಗೆ ಹೊಸ ರೂಪಾಂತರಿ ಓಮೈಕ್ರಾನ್ ತಗುಲಿದ್ದು, ಮುಂಬೈನಲ್ಲಿ 408, ಪುಣೆಯಲ್ಲಿ 71 ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳಲ್ಲಿ 70 ಹೊಸ ಓಮೈಕ್ರಾನ್ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿವೆ.
ರಾಜ್ಯಾದ್ಯಂತ ಒಟ್ಟು 3,98,391 ಮಂದಿ ಸೋಂಕಿತರು ಹೋಂ ಕ್ವಾರಂಟೈನ್ನಲ್ಲಿ ಇದ್ದಾರೆ. ಭಾರತದ ವಾಣಿಜ್ಯ ನಗರಿ ಮುಂಬೈ ಮುಂಬರುವ ಸುನಾಮಿಯನ್ನು ಎದುರಿಸಲು ಸಿದ್ದವಾಗಿದೆ ಎಂದು ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ಹೇಳಿದ್ದಾರೆ.
47,000 ಸಕ್ರಿಯ ಪ್ರಕರಣಗಳು
ಪ್ರಸ್ತುತ ಮಹಾರಾಷ್ಟ್ರದಲ್ಲಿ 47,000 ಸಕ್ರಿಯ ಪ್ರಕರಣಗಳಿದ್ದು, 4,491 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂಬೈ ನಗರದಾದ್ಯಂತ 16 ಕಂಟೈನ್ಮೆಂಟ್ ವಲಯಗಳಿದ್ದು, 369 ಕಟ್ಟಡಗಳನ್ನು ಸೀಲ್ಡೌನ್ ಮಾಡಲಾಗಿದೆ.
ದೆಹಲಿಯಲ್ಲಿ ರೆಡ್ ಅಲರ್ಟ್ ಸಾಧ್ಯತೆ
ದೆಹಲಿಯಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಸೋಂಕು ವೇಗವಾಗಿ ಹರಡುತ್ತಿರುವುದರಿಂದ ಮತ್ತು ಆಸ್ಪತ್ರೆಗಳಲ್ಲೂ ಕೊರೋನಾ ಪ್ರಕರಣಗಳು ಪತ್ತೆ ಆಗುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿಯಲ್ಲಿ ರೆಡ್ ಅಲರ್ಟ್ (Red Alert) ಘೋಷಿಸುವ ಮತ್ತು ಇನ್ನಷ್ಟು ಬಿಗಿ ನಿಯಮಗಳು ಜಾರಿಗೊಳಿಸುವ ಸಾಧ್ಯತೆ ಕಂಡುಬರುತ್ತಿದೆ.
ಈ ಹಿನ್ನೆಲೆಯಲ್ಲಿ ಇಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ (DDMA) ಸಭೆ ನಡೆಯುತ್ತಿದ್ದು ಸಭೆಯಲ್ಲಿ ಹೊಸ ನಿರ್ಬಂಧಗಳನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಅವುಗಳ ವಿವರ ಈ ಕೆಳಕಂಡಂತಿದೆ.
1. ಪಾಸಿಟಿವ್ ರೇಟ್ ಶೇಕಡಾ 5ರಷ್ಟನ್ನು ದಾಟಿದರೆ ಮತ್ತು ಸತತ ಎರಡು ದಿನಗಳವರೆಗೆ ಅದಕ್ಕಿಂತ ಹೆಚ್ಚಿದ್ದರೆ ಅಥವಾ 16000-ಕೇಸ್ ಮಾರ್ಕ್ ಅನ್ನು ದಾಟಿದರೆ ಅಥವಾ 3,000 ಹಾಸಿಗೆಗಳು ಭರ್ತಿಯಾದರೆ ರಾಷ್ಟ್ರ ರಾಜಧಾನಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗುತ್ತದೆ.
2. ವಾರಾಂತ್ಯವೂ ಸೇರಿದಂತೆ ಎಲ್ಲಾ ದಿನಗಳಲ್ಲೂ ಕರ್ಫ್ಯೂ ವಿಧಿಸಲಾಗುವುದು.
3. ಶಾಲೆಗಳು ಮತ್ತು ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗುವುದು.
4. ಅನಿವಾರ್ಯವಲ್ಲದ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳನ್ನು ಮುಚ್ಚಲಾಗುವುದು.
5. ಈಜುಕೊಳಗಳು ಮತ್ತು ಕ್ರೀಡಾಂಗಣಗಳನ್ನು ಮುಚ್ಚಲಾಗುವುದು. ಆದರೆ ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಈವೆಂಟ್‌ಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳನ್ನು ಮಾತ್ರ ಪರಿಗಣಿಸಲಾಗುವುದು.
6. ಧಾರ್ಮಿಕ ಸ್ಥಳಗಳು ತೆರೆದಿರುತ್ತವೆ ಆದರೆ ಯಾವುದೇ ಭಕ್ತರಿಗೆ ಭೇಟಿಯ ಅವಕಾಶ ಇರುವುದಿಲ್ಲ.
7. ಮದುವೆಗಳನ್ನು ಅನುಮತಿಸಲಾಗುವುದು ಆದರೆ ಅದರಲ್ಲಿ ಭಾಗವಹಿಸುವ ಜನರ ಸಂಖ್ಯೆಯನ್ನು 15ಕ್ಕೆ ಮಿತಿಗೊಳಿಸಲಾಗುವುದು. ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ, ಮನರಂಜನೆ ಇತ್ಯಾದಿಗಳಿಗಾಗಿ ಇತರ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು.
8. ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಮುಚ್ಚಿರುತ್ತವೆ. ಆದಾಗ್ಯೂ ಅಗತ್ಯ ಸೇವೆಗಳಲ್ಲಿ ತೊಡಗಿರುವ ಸರ್ಕಾರಿ ಕಚೇರಿಗಳು ಶೇಕಡಾ 100ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತವೆ. ಖಾಸಗಿ ಸಂಸ್ಥೆಗಳು, ವಿನಾಯಿತಿ ಪಡೆದರೆ, ನಿಯಮಗಳ ಪ್ರಕಾರ ಕಾರ್ಯನಿರ್ವಹಿಸಬಹುದಾಗಿದೆ.