ಅವಳಿ ಜವಳಿ ಮಕ್ಕಳು ಕಡಿಮೆ ಸಮಯದ ಅಂತರದಲ್ಲಿ ಜನಿಸುವುದು ಸಾಮಾನ್ಯ. ಆದರೆ, ಈ ಅವಳಿ ಮಕ್ಕಳು ಮಾತ್ರ ಬೇರೆ ಬೇರೆ ವರ್ಷದಲ್ಲಿ ಜನಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಅದು ಹೇಗೆ ಸಾಧ್ಯ ಅಂತೀರಾ? ಕೇವಲ 15 ನಿಮಿಷಗಳ ಅಂತರದಲ್ಲಿ ಜನಿಸಿದ ಅವಳಿ ಜೋಡಿಯು ವಿಭಿನ್ನ ವರ್ಷಗಳಲ್ಲಿ ತಮ್ಮ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಜನಿಸಿದ ಈ ಅವಳಿ ಮಕ್ಕಳು ಪ್ರಪಂಚದಾದ್ಯಂತ ಸುದ್ದಿಯಾಗಿದ್ದಾರೆ. ಅವಳಿ ಮಕ್ಕಳು ಸಾಮಾನ್ಯವಾಗಿ ಕೆಲವು ನಿಮಿಷಗಳ ಅಂತರದಲ್ಲಿ ಜನಿಸುತ್ತಾರೆ. ಅದರಂತೆ ಈ ಅವಳಿಗಳು ಕೂಡ ಕೇವಲ 15 ನಿಮಿಷದ ಅಂತರದಲ್ಲಿ ಜನಿಸಿದ್ದಾರೆ. ವಿಶೇಷ ಎಂದರೆ, ಮೊದಲ ಮಗು 2021ರ ಡಿಸೆಂಬರ್ 31ರ ರಾತ್ರಿ 11.45ಕ್ಕೆ ಜನಿಸಿದರೆ, ಮತ್ತೊಂದು ಮಗು 2022ರ ಜನವರಿ 1ರ ರಾತ್ರಿ 12 ಗಂಟೆಗೆ ಜನಿಸಿದೆ. ಈ ಮೂಲಕ ಎರಡು ಮಕ್ಕಳು ಬೇರೆ ಬೇರೆ ವರ್ಷದಲ್ಲಿ ಜನಿಸಿ ಅಚ್ಚರಿ ಮೂಡಿಸಿವೆ.
ಗ್ರೀನ್‌ಫೀಲ್ಡ್ ನಗರದ ಫಾತಿಮಾ ಮ್ಯಾಡ್ರಿಗಲ್ ಮತ್ತು ರಾಬರ್ಟ್ ಟ್ರುಜಿಲ್ಲೊಗೆ ಆಲ್ಫ್ರೆಡೊ ಎಂಬ ಹುಡುಗ ಮತ್ತು ಅವನ ಸಹೋದರಿ ಐಲಿನ್ ಜನಿಸಿದ್ದಾರೆ. ಬೇಬಿ ಅಯ್ಲಿನ್ ಯೊಲಾಂಡಾ ಟ್ರುಜಿಲ್ಲೊ ನಿಖರವಾಗಿ 2022 ರಲ್ಲಿ ಮಧ್ಯರಾತ್ರಿಯಲ್ಲಿ ಜನಿಸಿದಳು, ಅವಳಿ ಸಹೋದರ ಆಲ್ಫ್ರೆಡೋ ಆಂಟೋನಿಯೊ ಟ್ರುಜಿಲ್ಲೊ 2021 ರಲ್ಲಿ 15 ನಿಮಿಷಗಳ ಮೊದಲು ಜನಿಸಿದ್ದಾನೆ ಎಂದು ನಾಟಿವಿಡಾಡ್ ಮೆಡಿಕಲ್ ಸೆಂಟರ್ ತನ್ನ ಫೇಸ್ಬುಕ್ನಲ್ಲಿ ತಿಳಿಸಿದೆ. ಮ್ಯಾಡ್ರಿಗಲ್ ಅವರು ತಮ್ಮ ಇಬ್ಬರು ಮಕ್ಕಳು ವಿಶಿಷ್ಟ ಜನ್ಮದಿನಗಳನ್ನು ಹೊಂದಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ರೀತಿ ಇಬ್ಬರು ಬೇರೆ ಬೇರೆ ವರ್ಷಗಳಲ್ಲಿ ಜನಿಸುತ್ತಿರುವುದು ಅಚ್ಚರಿ ಮೂಡಿಸಿದೆ ಎಂದಿದ್ದಾರೆ. ಇನ್ನು ಈ ಮಕ್ಕಳ ಹೆರಿಗೆ ಮಾಡಿಸಿದ ವೈದ್ಯರು ಕೂಡ ಹರ್ಷ ವ್ಯಕ್ತಪಡಿಸಿದ್ದು, ಇದು ಖಂಡಿತವಾಗಿಯೂ ನನ್ನ ವೃತ್ತಿಜೀವನದ ಅತ್ಯಂತ ಸ್ಮರಣೀಯ ಹೆರಿಗೆಯಾಗಿದೆ. ಹೊಸ ವರ್ಷವನ್ನು ಪ್ರಾರಂಭಿಸಲು ಎಂತಹ ಅದ್ಭುತ ಮಾರ್ಗ ಇಲ್ಲ ಎಂದಿದ್ದಾರೆ.