KMFನಿಂದ ಅಪ್ಪುಗೆ ‘ಕ್ಷೀರ’ ನಮನ: ಹಾಲಿನ ಪ್ಯಾಕೆಟ್ ಮೇಲೆ ಪುನೀತ್ ಭಾವಚಿತ್ರ ಮುದ್ರಣ
ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜ್‌ಕುಮಾರ್ ಕೇವಲ ಚಿತ್ರರಂಗದಲ್ಲಿ ಮಾತ್ರವಷ್ಟೇ ನಟನಾಗಿರಲಿಲ್ಲ. ರಾಯಭಾರಿಯಾಗಿಯೂ ಬಹು ಬೇಡಿಕೆ ಹೊಂದಿದ್ದರು. ಹಲವು ಇಲಾಖೆಗಳ ರಾಯಭಾರಿಯಾಗಿ ಗುರುತಿಸಿಕೊಂಡಿದ್ದರು.
ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ಅಪ್ಪು, ತಂದೆಯ ಹಾದಿಯಂತೆಯೇ ನಡೆದುಕೊಂಡು ಬರುತ್ತಿದ್ದರು. ಗೌರವಧನ ಪಡೆಯದೇ 10 ವರ್ಷ ಕೆಎಂಎಫ್‌ನ ಉತ್ಪನ್ನವಾದ ನಂದಿನಿ ಹಾಲಿನ ರಾಯಭಾರಿಯಾಗಿ ಕೆಲಸ ಮಾಡಿದ್ದರು. ಇದೀಗ ಕೆಎಂಎಫ್ ಪುನೀತ್ಗೆ ಕ್ಷೀರ ನಮನ ಸಲ್ಲಿಸಲು ಮುಂದಾಗಿದೆ. ಹಾಲಿನ ಪ್ಯಾಕೆಟ್ ಮೇಲೆ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರ ಮುದ್ರಿಸಲಾಗಿದೆ.
ಡಾ.ರಾಜ್‌ಕುಮಾರ್ ಕೂಡ ಇದೇ ರೀತಿಯಲ್ಲಿ ರೈತರ ಮೇಲಿನ ಕಳಕಳಿಯಿಂದ ನಂದಿನಿ ಉತ್ಪನ್ನಗಳ ಪರವಾಗಿ ಉಚಿತವಾಗಿ ಪ್ರಚಾರ ನಡೆಸಿದ್ದರು. ಡಾ.ರಾಜ್ 1990ರಲ್ಲಿ ನಂದಿನಿ ಹಾಲಿನಲ್ಲಿ ಪ್ರಚಾರ ರಾಯಭಾರಿಯಾಗಿ ಕಾಣಿಸಿಕೊಂಡಿದ್ದರು. ಅದು ಟಿವಿ ಜಾಹೀರಾತೊಂದರಲ್ಲಿ ರಾಜ್ ಅವರ ಮೊದಲ ಮತ್ತು ಕಡೆಯ ನಟನೆಯಾಗಿತ್ತು. ತಮ್ಮ ತಂದೆಯ ಪರಂಪರೆಯನ್ನು ಮುಂದುವರೆಸುವ ನಿಟ್ಟಿನಲ್ಲಿಯೇ ಪುನೀತ್ ಕೂಡ ನಂದಿನಿ ಪರವಾಗಿ ಉಚಿತವಾಗಿ ಪ್ರಚಾರ ಮಾಡುವುದಾಗಿ ಹೇಳಿಕೊಂಡಿದ್ದರು. ಅದರಂತೆ 2009ರಲ್ಲಿ ಅವರು ಕೆಎಂಎಫ್ ಜೊತೆ ಈ ಕುರಿತು ಒಪ್ಪಂದಕ್ಕೆ ಸಹಿ ಹಾಕಿದ್ದರು.