ಬಿಡದಿ ಪುರಸಭೆ ಚುನಾವಣೆಯಲ್ಲಿ JDS ಭರ್ಜರಿ ಗೆಲುವು, ಮತದಾರರಿಗೆ ಅಭಿನಂದಿಸಿದ HDK
ರಾಮನಗರ(ಡಿ.30): ಬಿಡದಿ(Bidadi) ಪುರಸಭೆ ಚುನಾವಣಾ ಫಲಿತಾಂಶ(Result) ಇಂದು ಪ್ರಕಟವಾಗಿದ್ದು, ಜೆಡಿಎಸ್ ಭರ್ಜರಿ ಗೆಲುವು ಸಾಧಿಸಿದೆ. 23 ವಾರ್ಡ್ ಗಳ ಪೈಕಿ 14 ಜೆಡಿಎಸ್(JDS) ಪಾಲಾದರೆ, 09 ಕಾಂಗ್ರೆಸ್(Congress) ಪಾಲಾಗಿವೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(HD Kumaraswamy)ಗೆ ಇದು ಪ್ರತಿಷ್ಠಿತ ಚುನಾವಣೆ ಆಗಿತ್ತು. ಕೊನೆಗೂ ಬಿಡದಿ ಪುರಸಭೆ ಜೆಡಿಎಸ್ ಪಾಲಾಗಿದೆ. ಇದರೊಂದಿಗೆ ಶಾಸಕ ಎ.ಮಂಜು ವಿರುದ್ಧ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣಗೆ ಭಾರೀ ಮುಖಭಂಗ ಆಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಫೀಲ್ಡ್ಗೆ ಇಳಿದಿದ್ದ ಚುನಾವಣೆ(Election) ಇದಾಗಿತ್ತು. ಬಿಡದಿ ಪುರಸಭೆ ಮೇಲೆ ಡಿ.ಕೆ.ಬ್ರದರ್ಸ್(DK Brothers) ಕೂಡ ಕಣ್ಣಿಟ್ಟಿದ್ದರು. ಇದರ ನಡುವೆಯೂ ಜೆಡಿಎಸ್ ಗೆ ಭಾರೀ ಗೆಲುವು ಸಿಕ್ಕಿದೆ.
ಬಿಡದಿಯ ಜನ ದುಡಿಮೆಗೆ ಆಶೀರ್ವಾದ ಮಾಡಿದ್ದಾರೆ…
ಬಿಡದಿ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ಗೆ ಭರ್ಜರಿ ಗೆಲುವು ಹಿನ್ನೆಲೆ, ಬಿಡದಿಯ ಕೇತಗಾನಹಳ್ಳಿ ತೋಟದಮನೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಫಲಿತಾಂಶ ನನಗೆ ದೊಡ್ಡಮಟ್ಟದ ಅಚ್ಚರಿ ಫಲಿತಾಂಶ ಅಲ್ಲ. ನಾನು 18 – 20 ಸ್ಥಾನಗಳಲ್ಲಿ ಗೆಲುವು ಆಗಲಿದೆ ಅಂದುಕೊಂಡಿದ್ದೆ. ಕೆಲವು ಓವರ್ ಕಾನ್ಫಿಡೆನ್ಸ್ ನಲ್ಲೂ ಹೋಗಿದೆ. ಬಿಡದಿಯ ಮತದಾರರು ದುಡಿಮೆಗೆ ಆರ್ಶೀವಾದ ಮಾಡಿದ್ದಾರೆ. ನನಗೆ ರಾಜಕೀಯ ಜನ್ಮ ಕೊಟ್ಟ ಸ್ಥಳ ಬಿಡದಿ. ಬಿಡದಿಯ ಮತದಾರರಿಗೆ ಅಭಿನಂದನೆ ತಿಳಿಸುತ್ತೇನೆ ಎಂದು ಹೇಳಿದರು.
ಮುಂದುವರೆದ ಅವರು, ನಾನು ಎರಡು ದಿನ ಶಾಸಕರ ಜೊತೆ ಪ್ರಚಾರ ಮಾಡಿದ್ದೆ. ಮುಂದಿನ 2023 ರ ಚುನಾವಣೆಗೆ ಈ ಫಲಿತಾಂಶ ನನಗೆ ಮಾನಸಿಕವಾಗಿ ಶಕ್ತಿ ತುಂಬಿದೆ. ಕಾಂಗ್ರೆಸ್ ನವರು ದೊಡ್ಡಮಟ್ಟದಲ್ಲಿ ಬಿಡದಿ ಹಿಡಿಯಲು ಹೊರಟ್ಟಿದ್ದರು. ಕುಮಾರಸ್ವಾಮಿ ಕೇತಗಾನಹಳ್ಳಿ ಹಳ್ಳದಲ್ಲಿದ್ದಾನೆ, ಅಲ್ಲಿಗೆ ನೂಕುತ್ತೇವೆ ಎಂದಿದ್ದರು. ಸಂಸದರು, ಮಾಜಿ ಶಾಸಕರ ಜೊತೆ ದೊಡ್ಡ ಹಿಂಡಿತ್ತು. ಆದರೆ ಬಿಡದಿಯ ಮತದಾರರು ಆರ್ಶೀವಾದ ಮಾಡಿದ್ದಾರೆ ಎಂದರು.
ನಮ್ಮನ್ನು ಬಿಟ್ಟು ಬೇರೆಯವರು ಅಧಿಕಾರ ಹಿಡಿಯಲು ಸಾಧ್ಯವೇ ಇಲ್ಲ
ರಾಜ್ಯದ ಬಿಜಾಪುರ, ರಾಯಚೂರು, ಶಿರಾದಲ್ಲಿಯೂ ನಮ್ಮವರು ಗೆದ್ದಿದ್ದಾರೆ. ಶಿರಾದಲ್ಲಿ ಜೆಡಿಎಸ್ ಮುಳುಗಿತು ಅನ್ನುತ್ತಿದ್ದರು. ಜನ ಇವತ್ತು ಅಲ್ಲಿಯೂ ಉತ್ತರ ನೀಡಿದ್ದಾರೆ. ಉಪಚುನಾವಣೆಗಳು ಬೇರೆ, ಸಾರ್ವತ್ರಿಕ ಚುನಾವಣೆಗಳು ಬೇರೆ. 2023 ರಲ್ಲಿ ಜೆಡಿಎಸ್ ಏನು ಎಂದು ಜನರೇ ಉತ್ತರ ಕೊಡ್ತಾರೆ. ಕಾಂಗ್ರೆಸ್ ನವರು ಮೇಲುಗೈ ಆಗಲು ಸಾಧ್ಯವಿಲ್ಲ. ಚಿಕ್ಕಮಗಳೂರಿನಲ್ಲಿ ನಮ್ಮನ್ನ ಬಿಟ್ಟು ಬೇರೆಯವರು ಅಧಿಕಾರ ಮಾಡಲು ಆಗಲ್ಲ. ಅಲ್ಲಿನ ನಗರಸಭೆ ನಮ್ಮ ಬೆಂಬಲ ಇದ್ದವರಿಗೆ ಅಧಿಕಾರ. ರಾಜ್ಯದ ಹಲವಾರು ಕ್ಷೇತ್ರದಲ್ಲಿ ನಮ್ಮ ಬೆಂಬಲ ಬೇಕೆ ಬೇಕು, ಅದೇ ಪರಿಸ್ಥಿತಿ ಇದೇ ಎಂದು ಹೇಳಿದರು.
ರಾಜಕೀಯ ವಿಶ್ಲೇಷಕರ ನಿರೀಕ್ಷೆ ಬದಲಾಗಲಿದೆ
ನಾವು ಆರ್ಥಿಕವಾಗಿ ಶಕ್ತಿ ತುಂಬಿಲ್ಲ, ಕಾರ್ಯಕರ್ತರೇ ಹೋರಾಟ ಮಾಡಿದ್ದಾರೆ. ಕರಾವಳಿಯಲ್ಲಿಯೂ ನಮಗೆ ಒಂದು ಸ್ಥಾನ ಸಿಕ್ಕಿದೆ, ಅಲ್ಲಿ ನಮ್ಮ ಬೇಸ್ ಇರಲಿಲ್ಲ. 2023 ನಮ್ಮ ಪಕ್ಷದ ಸಂಘಟನಾ ವರ್ಷ. ರಾಜಕೀಯ ವಿಶ್ಲೇಷಕರ ನಿರೀಕ್ಷೆ ಬದಲಾಗಲಿದೆ. ಸಂಕ್ರಾಂತಿಯಿಂದ ಒಂದು ದಿನವೂ ಬಿಡುವು ತೆಗೆದುಕೊಳ್ಳಲ್ಲ. 123 ಗುರಿ ತಲುಪಲು ಸಂಘಟನೆ ಮಾಡ್ತೇವೆ, ಯಾರು ಎಷ್ಟೇ ಲಘುವಾಗಿ ಮಾತನಾಡಲಿ. ನಮ್ಮದೇ ಆದ ರೀತಿಯಲ್ಲಿ ಸಂಘಟನೆ ಪ್ರಾರಂಭಿಸುತ್ತೇವೆ ಎಂದು ಬಿಡದಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.