ಭಾರತದಲ್ಲಿ ದೊಡ್ಡ ದಾಳಿಗೆ ಸಂಚು ಮಾಡಿದ್ದ ಉಗ್ರ ಜರ್ಮನಿಯಲ್ಲಿ ಬಂಧನ..!
ಭಯೋತ್ಪಾದಕ ಚಟುವಟಿಕೆ
ಇನ್ನು, ಭಾರತದಲ್ಲಿ ದೊಡ್ಡ ದಾಳಿಗಳನ್ನು ಯೋಜಿಸಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಇರುವುದರಿಂದ ಜರ್ಮನ್ ಪೊಲೀಸರು ಆ ದಾಳಿಗಳನ್ನು ತಡೆಯಲು ಆತನನ್ನು ಬಂಧಿಸಿದ್ದಾರೆ ಎಂದೂ ವರದಿಗಳು ಹೇಳುತ್ತಿವೆ. ಎಸ್‌ಎಫ್‌ಜೆ ಸಂಘಟನೆಯ ಆಪರೇಟೀವ್ ಆಗಿರುವ ಜಸ್ವಿಂದರ್ ಸಿಂಗ್ ಮುಲ್ತಾನಿ ಇತ್ತೀಚೆಗೆ ತನ್ನ ಪಾಕಿಸ್ತಾನ ಮೂಲದ ಸಹಚರರು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆದಾರರ ಸಹಾಯದಿಂದ ಗಡಿಯಾಚೆಯಿಂದ ಪಂಜಾಬ್‌ಗೆ ಸ್ಫೋಟಕಗಳು, ಹ್ಯಾಂಡ್ ಗ್ರೆನೇಡ್‌ಗಳು ಇತ್ಯಾದಿಗಳನ್ನು ಒಳಗೊಂಡಿರುವ ಶಸ್ತ್ರಾಸ್ತ್ರ ರವಾನೆಗಳನ್ನು ವ್ಯವಸ್ಥೆಗೊಳಿಸುವುದು ಮತ್ತು ಕಳುಹಿಸುವುದು ಗಮನಕ್ಕೆ ಬಂದ ಹಿನ್ನೆಲೆ ಆತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಪಂಜಾಬ್ ಮೂಲದ ಉಗ್ರರಿಗೆ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪಾಕಿಸ್ತಾನದಿಂದ ಸ್ಫೋಟಕ ವಸ್ತುಗಳನ್ನು ಕಳುಹಿಸಲು ಮುಲ್ತಾನಿ ಯೋಜಿಸುತ್ತಿದ್ದರು ಎಂದೂ ಮೂಲಗಳು ತಿಳಿಸಿವೆ.
ಎಚ್ಚರಿಕೆ ನೀಡಿದ್ದ ಗುಪ್ತಚರ ಸಂಘಟನೆ..!
ಪ್ರಸ್ತುತ ಪಾಕಿಸ್ತಾನದಲ್ಲಿರುವ ಬಬ್ಬರ್ ಖಾಲ್ಸಾ ಭಯೋತ್ಪಾದಕ ಹರ್ವಿಂದರ್ ಸಿಂಗ್ ಸಂಧು ಮತ್ತು ಎಸ್‌ಎಫ್‌ಜೆ ಸಂಘಟನೆಯ ಉನ್ನತ ಸದಸ್ಯ ಮತ್ತು ಜರ್ಮನಿಯಲ್ಲಿ ನೆಲೆಸಿರುವ ಗುರುಪತ್‌ವಂತ್ ಸಿಂಗ್ ಪನ್ನು ನಿಕಟವರ್ತಿ ಜಸ್ವಿಂದರ್ ಸಿಂಗ್ ಮುಲ್ತಾನಿ ಪಂಜಾಬ್‌ನ ಲೂಧಿಯಾನಾ ಸ್ಫೋಟದಲ್ಲಿ ಭಾಗಿಯಾಗಿರುವ ಬಗ್ಗೆ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ್ದವು. ಬಳಿಕ ಈ ಸಂಬಂಧ ರಾಜತಾಂತ್ರಿಕ ಸಮನ್ವಯದ ನಂತರ, ಪಂಜಾಬ್‌ನ ಲೂಧಿಯಾನ ಸ್ಫೋಟದಲ್ಲಿ ಪಾತ್ರವಹಿಸಿದ್ದಕ್ಕಾಗಿ ಮತ್ತು ರಾಷ್ಟ್ರ ರಾಜಧಾನಿ ನವದೆಹಲಿ ಸೇರಿ ಭಾರತದ ಇತರ ನಗರಗಳಲ್ಲಿ ಹೆಚ್ಚಿನ ಭಯೋತ್ಪಾದಕ ದಾಳಿಗಳನ್ನು ಯೋಜಿಸಿದ್ದಕ್ಕಾಗಿ ಜರ್ಮನ್ ಪೊಲೀಸರು ಮುಲ್ತಾನಿಯನ್ನು ಎರ್ಫರ್ಟ್ ನಗರದಿಂದ ಬಂಧಿಸಿದರು.
ಎಸ್‌ಎಫ್‌ಐ ಸಂಘಟನೆಯ ಘಟಕ ಭೇದಿಸಿದ್ದ ಪಂಜಾಬ್..!
ಪಂಜಾಬ್ ಪೊಲೀಸರು ಸೆಪ್ಟೆಂಬರ್ ತಿಂಗಳಲ್ಲೇ ಎಸ್‌ಎಫ್‌ಐ ಸಂಘಟನೆಯ ಮಾಡ್ಯೂಲ್ ಅನ್ನು ಭೇದಿಸಿದ್ದರು ಮತ್ತು ಖನ್ನಾದ ರಾಮ್‌ಪುರ ಗ್ರಾಮದಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ‘ಜನಮತಸಂಗ್ರಹ 2020’ (‘Referendum 2020’)ಚಟುವಟಿಕೆಗಳನ್ನು ಉತ್ತೇಜಿಸುವ ಲಕ್ಷಗಟ್ಟಲೆ ಕರಪತ್ರಗಳನ್ನು ವಶಪಡಿಸಿಕೊಂಡ ನಂತರ ಆ ಸಂಘಟನೆಯ ಮೂವರು ಸದಸ್ಯರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದರು.
ಲೂಧಿಯಾನ ನ್ಯಾಯಾಲಯದ ಸ್ಫೋಟ ಪ್ರಕರಣದೊಂದಿಗೂ ಸಂಘಟನೆಯ ನಂಟು..!
ಈ ತಿಂಗಳು ಲೂಧಿಯಾನ ನ್ಯಾಯಾಲಯದಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಒಬ್ಬ ವ್ಯಕ್ತಿ ಬಲಿಯಾಗಿದ್ದು, ಇತರ ಐವರು ಗಾಯಗೊಂಡಿದ್ದರು. ಈ ಸ್ಫೋಟ ಪ್ರಕರಣದಲ್ಲಿ ಸಿಖ್ಸ್ ಫಾರ್ ಜಸ್ಟೀಸ್ (SFJ) ಗುಂಪು ಕೂಡ ನಂಟು ಹೊಂದಿದೆ ಎನ್ನಲಾಗುತ್ತಿದೆ.
ಭಾರತದಲ್ಲಿ ಬ್ಯಾನ್ ಆಗಿರುವ ಸಂಘಟನೆ..!
ಸಿಖ್ಸ್ ಫಾರ್ ಜಸ್ಟೀಸ್ ಅಮೆರಿಕ ಮೂಲದ ಸಂಘಟನೆಯಾಗಿದ್ದು, ಪಂಜಾಬ್‌ನಲ್ಲಿ ಸಿಖ್‌ಗಳಿಗೆ ಖಲಿಸ್ತಾನ್ ಎಂಬ ಪ್ರತ್ಯೇಕ ರಾಜ್ಯವನ್ನು ಒತ್ತಾಯಿಸುತ್ತಿದೆ. ಇನ್ನೊಂದೆಡೆ, ಪಂಜಾಬ್‌ನಲ್ಲಿ ಪ್ರತ್ಯೇಕತೆ ಮತ್ತು ಹಿಂಸಾತ್ಮಕ ಉಗ್ರಗಾಮಿತ್ವವನ್ನು ಉತ್ತೇಜಿಸುವುದಕ್ಕಾಗಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ 2019ರಲ್ಲಿ ಭಾರತ ಸರ್ಕಾರವು ಈ ಸಂಘಟನೆಯನ್ನು ನಿಷೇಧಿಸಿತ್ತು.