ಮುಸ್ಲಿಂ-ಕ್ರೈಸ್ತರನ್ನು ಆದಷ್ಟು ಬೇಗ ಹಿಂದೂ ಧರ್ಮಕ್ಕೆ ಕರೆತರಬೇಕು; ತೇಜಸ್ವಿ ಸೂರ್ಯ
ಉಡುಪಿ(ಡಿ.26): ಸದ್ಯ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ(Anti Conversion Bill)ಯದ್ದೇ ಭಾರೀ ಚರ್ಚೆ. ಹಲವು ವಿರೋಧಗಳ ನಡುವೆಯೇ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕವನ್ನು ಪಾಸ್ ಮಾಡಿದೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ವಿಪಕ್ಷಗಳಾದ ಕಾಂಗ್ರೆಸ್(Congress) ಹಾಗೂ ಜೆಡಿಎಸ್ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಭಾರೀ ಆಕ್ಷೇಪ ವ್ಯಕ್ತಪಡಿಸುತ್ತಿವೆ. ಈ ನಡುವೆಯೇ ಬಿಜೆಪಿ ಸಂಸದ ತೇಜಸ್ವಿ ಸೂರ್ಯ(BJP MP Tejasvi Surya) ಉಡುಪಿಯಲ್ಲಿ ಮಾತನಾಡಿ, ಮತಾಂತರವಾಗಿ ಪಾಕಿಸ್ತಾನಕ್ಕೆ ಹೋದವರನ್ನು ಹಿಂದೂ ಧರ್ಮಕ್ಕೆ ಕರೆತರಬೇಕು ಎಂದು ಜನರಿಗೆ ಕರೆ ನೀಡಿದ್ದಾರೆ.
ಕೃಷ್ಣ ಮಠದಲ್ಲಿ ನಡೆದ ವಿಶ್ವರೂಪಂ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಮುಸ್ಲಿಮರನ್ನ, ಕ್ರೈಸ್ತರನ್ನು ಘರ್ ವಾಪಸಿ ಮಾಡದೆ ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ. ಮತಾಂತರವಾಗಿ ಪಾಕಿಸ್ತಾನಕ್ಕೆ ಹೋದವರನ್ನು ಹಿಂದೂ ಧರ್ಮಕ್ಕೆ ಕರೆತರಬೇಕು. ಚೀನಾ, ಜಪಾನಿಗೆ ಮತಾಂತರಗೊಂಡವರನ್ನು ಭಾರತಕ್ಕೆ ತರಬೇಕು. ಟಿಪ್ಪು ಜಯಂತಿಯಂದೇ ನಾವು ಹಿಂದೂ ಧರ್ಮಕ್ಕೆ ಮರುಮತಾಂತರ ಮಾಡಬೇಕು ಎಂದು ಹೇಳಿದರು.
ಮುಂದುವರೆದ ಅವರು, ಟಿಪ್ಪುವಿನ ಖಡ್ಗದ ಕಾರಣಕ್ಕೆ ಬಹಳ ಮತಾಂತರಗಳು ಆಗಿವೆ. ಅಸಾಧ್ಯ ಎಂಬುದು ಯಾವುದೂ ಇಲ್ಲ. ನಮ್ಮ ಮನೆ, ಅಕ್ಕ-ಪಕ್ಕದ ಗ್ರಾಮ, ಊರುಗಳಲ್ಲಿ ಘರ್ ವಾಪಸೀ ಮಾಡಬೇಕು. ನಾವು ದೊಡ್ಡದಾಗಿ ಕನಸನ್ನು ಕಾಣಬೇಕು ಎಂದರು.
ಈ ದೇಶದಲ್ಲಿ ರಾಮಮಂದಿರವನ್ನು ಸ್ಥಾಪನೆ ಮಾಡಿದ್ದೇವೆ. ಕಾಶ್ಮೀರದ 370 ಕಾಯ್ದೆಯನ್ನು ತೆಗೆದು ಹಾಕಿದ್ದೇವೆ. ಪಾಕಿಸ್ತಾನದ ಮುಸಲ್ಮಾನರನ್ನು ಹಿಂದೂಗಳಾಗಿ ಪರಿವರ್ತನೆ ಮಾಡಬೇಕು. ಘರ್ ವಾಪಸೀಯನ್ನು ಆದ್ಯ ಕರ್ತವ್ಯದ ರೀತಿಯಲ್ಲಿ ನಾವು ಮಾಡಬೇಕಾಗಿದೆ. ಅಖಂಡ ಭಾರತದ ಕಲ್ಪನೆಯಲ್ಲಿ ಪಾಕಿಸ್ತಾನವೂ ಇದೆ. ಮಠ ದೇವಸ್ಥಾನ ಇದರ ಮುಂದಾಳತ್ವ ವಹಿಸಬೇಕು ಎಂದು ಉಡುಪಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಕರೆ ನೀಡಿದರು.
ಏನಿದು ಮತಾಂತರ ನಿಷೇಧ ಕಾಯ್ದೆ?
‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ವಿಧೇಯಕ-2021‘ 14 ಸೆಕ್ಷನ್ಗಳನ್ನು ಒಳಗೊಂಡಿದೆ. ಈ ವಿಧೇಯಕವನ್ನು ಮತಾಂತರ ನಿಷೇಧ ಕಾಯಿದೆ ಎಂದೂ ಸಹ ಕರೆಯುತ್ತಾರೆ. ಈ ವಿಧೇಯಕದ ಅಡಿಯಲ್ಲಿ ತಪ್ಪು ನಿರೂಪಣೆ, ಮೋಸ, ಅನಗತ್ಯ ಒತ್ತಡ, ಬಲಾತ್ಕಾರ, ಆಮಿಷ ಆಕರ್ಷಣೆಗಳ ಹಾಗೂ ಮದುವೆ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರ ಮಾಡುವುದನ್ನು ನಿಷೇಧಿಸಲಾಗಿದೆ. ಮತಾಂತರದ ಕುರಿತು ನೊಂದ ಅಥವಾ ಪೀಡಿತ ವ್ಯಕ್ತಿ, ನೊಂದ ವ್ಯಕ್ತಿಯ ಸೋದರ, ಸೋದರಿ, ಪಾಲಕ ಪೊಷಕರು, ರಕ್ತ ಸಂಬಂಧಿ ಅಥವಾ ದತ್ತು ಪಡೆದವರು ದೂರು ನೀಡಲು ಅರ್ಹರಾಗಿರುತ್ತಾರೆ.
ಶಿಕ್ಷೆ ಮತ್ತು ದಂಡದ ಪ್ರಮಾಣ ಎಷ್ಟು?
ಈ ವಿಧೇಯಕದ ಪ್ರಕಾರ, ನಿಯಮ ಬಾಹಿರವಾಗಿ ಮತಾಂತರ ಮಾಡಿದ್ದು ಸಾಬೀತಾದರೆ 3 ರಿಂದ 5 ವರ್ಷ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಜೊತೆಗೆ ವಯಸ್ಕರಲ್ಲದವರನ್ನು, ಮಹಿಳೆಯನ್ನು ಹಾಗೂ ಪರಿಶಿಷ್ಟ ವರ್ಗ ಅಥವಾ ಪಂಗಡದವರನ್ನ ನಿಯಮಬಾಹಿರವಾಗಿ ಮತಾಂತರ ಮಾಡಿದರೆ 3 ರಿಂದ 10 ವರ್ಷಗಳವರೆಗೆ ಶಿಕ್ಷೆ ಹಾಗೂ 35 ಸಾವಿರ ರೂ. ದಂಡವನ್ನು ವಿಧಿಸಲು ತಿಳಿಸಲಾಗಿದೆ.