ಕ್ರೀಡೆ

Pro Kabaddi League: ಬಲಿಷ್ಠ ಬೆಂಗಾಲ್ ಸವಾಲಿಗೆ ರೆಡಿಯಾದ ಬೆಂಗಳೂರು ಬುಲ್ಸ್

ಬೆಂಗಳೂರು(ಡಿ.26): 8ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ (Pro Kabaddi League) ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ (Bengaluru Bulls) ತಂಡ ಭಾನುವಾರ, ಹಾಲಿ ಚಾಂಪಿಯನ್‌ ಬೆಂಗಾಲ್‌ ವಾರಿಯ​ರ್ಸ್ (Bengal Warriors) ಸವಾಲನ್ನು ಎದುರಿಸಲಿದೆ. ಆರಂಭಿಕ ಪಂದ್ಯದಲ್ಲಿ ಯು ಮುಂಬಾ (U Mumba) ವಿರುದ್ಧ ಸೋಲಿನ ಆಘಾತ ಅನುಭವಿಸಿದ್ದ ಬುಲ್ಸ್‌, ಬಳಿಕ ತಮಿಳ್‌ ತಲೈವಾಸ್‌ (Tamil Thalaivas) ವಿರುದ್ಧ ಜಯಭೇರಿ ಬಾರಿಸಿತ್ತು. ಮುಂಬಾ ವಿರುದ್ಧ ವೈಫಲ್ಯ ಕಂಡಿದ್ದ ತಂಡದ ರಕ್ಷಣಾ ಪಡೆ, ತಲೈವಾಸ್‌ ವಿರುದ್ಧದ ಪಂದ್ಯದಲ್ಲಿ ನೀಡಿದ್ದ ಉತ್ತಮ ಪ್ರದರ್ಶನದಿಂದಾಗಿ ಬುಲ್ಸ್‌ಗೆ ಗೆಲುವು ಒಲಿದಿತ್ತು. ತಾರಾ ರೈಡರ್‌ ಪವನ್‌ ಶೆರಾವತ್‌ಗೆ (Pawan Sehrawat) ಚಂದ್ರನ್‌ ರಂಜಿತ್‌ ಉತ್ತಮ ಬೆಂಬಲ ನೀಡುತ್ತಿದ್ದು, ಸೌರಭ್‌ ನಂದಲ್‌ ಹಾಗೂ ಮಯೂರ್‌ ಡಿಫೆನ್ಸ್‌ನಲ್ಲಿ ಮಿಂಚುತ್ತಿದ್ದಾರೆ.

ಇನ್ನು, ಆಡಿರುವ ಎರಡೂ ಪಂದ್ಯಗಳಲ್ಲಿ ಗೆದ್ದಿರುವ ಬಲಿಷ್ಠ ಬೆಂಗಾಲ್‌, ತಾರಾ ರೈಡರ್‌ಗಳ ಜೊತೆ ಉತ್ತಮ ರಕ್ಷಣಾ ಪಡೆಯನ್ನೂ ಹೊಂದಿದೆ. ನಾಯಕ ಮಣೀಂದರ್‌ ಸಿಂಗ್‌ಗೆ (Maninder Singh) ಕನ್ನಡಿಗ ಸುಕೇಶ್‌ ಹೆಗ್ಡೆ ರೈಡಿಂಗ್‌ನಲ್ಲಿ ಬೆಂಬಲ ನೀಡುತ್ತಿದ್ದು, ಇರಾನ್‌ನ ಮೊಹಮದ್‌ ನಬೀಭಕ್ಷ್‌ ಆಲ್ರೌಂಡ್‌ ಪ್ರದರ್ಶನ ತೋರುತ್ತಿದ್ದಾರೆ. ತನ್ನ ತಂತ್ರಗಾರಿಕೆ, ಬಲಿಷ್ಠ ಆಟದಿಂದ ಎದುರಾಳಿಯನ್ನು ಕಾಡುತ್ತಿರುವ ಬೆಂಗಾಲ್‌ ವಿರುದ್ಧ ಸಾಂಘಿಕ ಪ್ರದರ್ಶನ ನೀಡಿದರಷ್ಟೇ ಬುಲ್ಸ್‌ಗೆ ಗೆಲುವು ದಕ್ಕಲಿದೆ.

ಇಂದಿನ ಪಂದ್ಯಗಳು

ಗುಜರಾತ್‌ ಜೈಂಟ್ಸ್‌-ದಬಾಂಗ್‌ ಡೆಲ್ಲಿ
ಸಮಯ: ಸಂಜೆ 7.30ಕ್ಕೆ

ಬೆಂಗಳೂರು ಬುಲ್ಸ್‌-ಬೆಂಗಾಲ್‌ ವಾರಿಯರ್ಸ್
ಸಮಯ: ರಾತ್ರಿ 8.30ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಮಾಜಿ ತಂಡದ ವಿರುದ್ಧ ಪ್ರದೀಪ್‌ ನರ್ವಾಲ್‌ ಮಿಂಚು

ಬೆಂಗಳೂರು: ‘ರೈಡ್‌ ಮಷಿನ್‌’ ಆಗಿ ಬೆಳೆಯಲು ತಮಗೆ ಅವಕಾಶ ಕೊಟ್ಟ ಪಾಟ್ನಾ ಪೈರೇಟ್ಸ್‌ ವಿರುದ್ಧ ಪ್ರದೀಪ್‌ ನರ್ವಾಲ್‌ (Pradeep Narwal) ಶನಿವಾರ ಮೊದಲ ಬಾರಿಗೆ ಸೆಣಸಿದರು. 12 ರೈಡ್‌ ಅಂಕಗಳನ್ನು ಗಳಿಸಿ 8ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಯು.ಪಿ.ಯೋಧಾ ಮೊದಲ ಗೆಲುವು ದಾಖಲಿಸಲು ನೆರವಾದರು. ಭಾರೀ ರೋಚಕತೆಯಿಂದ ಕೂಡಿದ್ದ ಪಂದ್ಯದ ಕೊನೆಯ ರೈಡ್‌ ಫಲಿತಾಂಶವನ್ನು ನಿರ್ಧರಿಸಿತು. 36-35ರಲ್ಲಿ ಯೋಧಾ ಗೆಲುವಿನ ನಗೆ ಬೀರಿತು.

ಕೊನೆ ರೈಡ್‌ಗೂ ಮುನ್ನ ಯೋಧಾ 35-34ರಲ್ಲಿ ಮುಂದಿತ್ತು. ಸುರೇಂದ್ರ ಗಿಲ್‌ ಕೊನೆಯ ರೈಡ್‌ನಲ್ಲಿ ಔಟಾಗುವ ಮುನ್ನ ಬೋನಸ್‌ ಅಂಕ ಹೆಕ್ಕಿದರು. ಇದರಿಂದಾಗಿ ಎರಡೂ ತಂಡಗಳಿಗೆ ತಲಾ ಒಂದು ಅಂಕ ದೊರೆಯಿತು. ಯೋಧಾ ಒಂದು ಅಂಕದ ಅಂತರದಲ್ಲಿ ಗೆದ್ದು ಖಾತೆ ತೆರೆಯಿತು. ಮೊದಲ ಪಂದ್ಯದಲ್ಲಿ ಜಯಿಸಿದ್ದ ಪಾಟ್ನಾ, ವೀರೋಚಿತ ಸೋಲು ಕಂಡರೂ 1 ಅಂಕ ಗಳಿಸಿತು. ಪಾಟ್ನಾ ಪರ ಸಚಿನ್‌ ತನ್ವರ್‌ 5 ರೈಡ್‌ ಅಂಕ, 5 ಟ್ಯಾಕಲ್‌ ಅಂಕ ಗಳಿಸಿದರು. ನಾಯಕ, ಕನ್ನಡಿಗ ಪ್ರಶಾಂತ್‌ ರೈ 8 ರೈಡಿಂಗ್‌ ಅಂಕ ಸಂಪಾದಿಸಿದರು.

ಟೈಟಾನ್ಸ್‌ಗೆ ಸೋಲುಣಿಸಿದ ಪಲ್ಟನ್‌

ಬೆಂಗಳೂರು: ಪಂದ್ಯದುದ್ದಕ್ಕೂ ಆಲ್ರೌಂಡ್‌ ಪ್ರದರ್ಶನ ನೀಡಿದ ಪುಣೇರಿ ಪಲ್ಟನ್‌ ತಂಡ 8ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಮೊದಲ ಗೆಲುವು ಸಾಧಿಸಿತು. ಶನಿವಾರ ತೆಲುಗು ಟೈಟಾನ್ಸ್‌ ವಿರುದ್ಧದ ರೋಚಕ ಕಾದಾಟದಲ್ಲಿ ಪುಣೇರಿ, 34-33 ಅಂಕಗಳಿಂದ ಜಯಭೇರಿ ಬಾರಿಸಿತು. 

ಸಿದ್ಧಾರ್ಥ್ ದೇಸಾಯಿ ಅಮೋಘ ಆಟದ ನೆರವಿನಿಂದ ಟೈಟಾನ್ಸ್‌ ಆರಂಭದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಅವರು ಪಂದ್ಯದಲ್ಲಿ ಒಟ್ಟು 14 ರೈಡಿಂಗ್‌ ಅಂಕ ಗಳಿಸಿದರು. ಮೊದಲಾರ್ಧದಲ್ಲಿ ಟೈಟಾನ್ಸ್‌ 20-14 ಅಂಕಗಳಿಂದ ಮುನ್ನಡೆಯಲ್ಲಿತ್ತು. ಆದರೆ ದ್ವಿತೀಯಾರ್ಧದಲ್ಲಿ ತಿರುಗೇಟು ನೀಡಿದ ಪುಣೇರಿ, ರೈಡಿಂಗ್‌ನಲ್ಲಿ 17 ಮತ್ತು ಡಿಫೆನ್ಸ್‌ನಲ್ಲಿ 7 ಅಂಕ ಗಳಿಸಿ ಜಯ ಸಾಧಿಸಿತು. ಮೋಹಿತ್‌ ಗೋಯತ್‌ 9 ರೈಡಿಂಗ್‌ ಅಂಕ ಪಡೆದರೆ, ಆಲ್ರೌಂಡರ್‌ ಅಸ್ಲಂ 5 ರೈಡಿಂಗ್‌, 3 ಟ್ಯಾಕಲ್‌ ಅಂಕ ಗಳಿಸಿದರು.

Related Articles

Leave a Reply

Your email address will not be published. Required fields are marked *

Back to top button