ಭಾರತ ದೇಶದ ಪೌರತ್ವಕ್ಕಾಗಿ ಮುಗಿಬಿದ್ದ ಪಾಕಿಸ್ತಾನಿಯರು.!
ದೇಶ ವಿಭಜನೆಯ ನಂತರ ಭಾರತ, ಪಾಕಿಸ್ತಾನದ (India and Pakistan) ನಡುವೆ ಹಾವು, ಮುಂಗುಸಿಯಂಥ ದ್ವೇಷ ಹೊಗೆಯಾಡುತ್ತಿರುವುದು ಜಗಜ್ಜಾಹೀರು. ಆದರೆ, ಇಂಥ ತ್ವೇಷಮಯ ವಾತಾವರಣದ ನಡುವೆಯೇ ಅಚ್ಚರಿಯ ಸಂಗತಿಯೊಂದು ಬಯಲಾಗಿದೆ. ಕಳೆದ 5 ವರ್ಷಗಳಲ್ಲಿ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿರುವ ವಿದೇಶಿಯರ ಪೈಕಿ 7,000 ಮಂದಿ ಪಾಕಿಸ್ತಾನಿಯರಿದ್ದು, (Foreign nationals) ಒಟ್ಟು ಸಲ್ಲಿಕೆಯಾಗಿರುವ 10,635 ಅರ್ಜಿಗಳ ( Applications) ಪೈಕಿ ಈ ಪ್ರಮಾಣ ಶೇ. 70ರಷ್ಟಿದೆ! ಬುಧವಾರ ಈ ಮಾಹಿತಿಯನ್ನು ಖುದ್ದು ಗೃಹ ಖಾತೆಯ (State Minister for Home Affairs) ರಾಜ್ಯ ಸಚಿವ ನಿತ್ಯಾನಂದ ರಾಯ್(Nithyananda Roy) ರಾಜ್ಯಸಭೆಗೆ (Rajya Sabha) ತಿಳಿಸಿದ್ದಾರೆ.ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿರುವವರ ವಿವರ ಮತ್ತು ಅವರ ಹಾಲಿ ಪೌರತ್ವದ ಕುರಿತು ಸಂಸದ ಅಬ್ದುಲ್ ವಹಾಬ್ ಅವರ ಪ್ರಶ್ನೆಗೆ ನಿತ್ಯಾನಂದ ರಾಯ್ ಉತ್ತರಿಸುತ್ತಿದ್ದರು.
ಭಾರತ ಪೌರತ್ವಕ್ಕಾಗಿ ಅರ್ಜಿ
ಲೋಕಸಭೆಯ ಕಲಾಪದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿರುವವರ ಪೈಕಿ ಅಫ್ಘಾನಿಸ್ತಾನೀಯರು ಎರಡನೇ ಸ್ಥಾನದಲ್ಲಿದ್ದು, ಒಟ್ಟು 1,152 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇವರ ಬೆನ್ನಿಗೆ ಶ್ರೀಲಂಕಾ ಮತ್ತು ಅಮೆರಿಕಾದಿಂದ ನಿರ್ವಸತಿಗರಾಗಿರುವ 428 ಮಂದಿ, ನೇಪಾಳದಿಂದ 161 ಮಂದಿ ಹಾಗೂ ಬಾಂಗ್ಲಾದೇಶದಿಂದ 161 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇವರೊಂದಿಗೆ 10 ಮಂದಿ ಚೀನೀಯರೂ ಭಾರತ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಬೌದ್ಧರು ಎಷ್ಟು ಮಂದಿ
ತೆಲಂಗಾಣ ರಾಷ್ಟ್ರೀಯ ಸಮಿತಿಗೆ ಸೇರಿದ ಮತ್ತೊಬ್ಬ ರಾಜ್ಯಸಭಾ ಸದಸ್ಯ ಕೇಶವ ರಾವ್ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿರುವ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನಕ್ಕೆ ಸೇರಿರುವ ಪೈಕಿ ಹಿಂದೂ, ಸಿಖ್, ಜೈನ್, ಕ್ರಿಶ್ಚಿಯನ್ ಹಾಗೂ ಬೌದ್ಧರು ಎಷ್ಟು ಮಂದಿ ಇದ್ದಾರೆ ಎಂದು ಪ್ರಶ್ನಿಸಿದರು.
ಅದಕ್ಕೆ ಪ್ರತಿಯಾಗಿ ಉತ್ತರಿಸಿದ ನಿತ್ಯಾನಂದ ರಾಯ್ 2018, 2019, 2020 ಹಾಗೂ 2021ರ ಅವಧಿಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದೂ, ಸಿಖ್, ಜೈನ್ ಹಾಗೂ ಕ್ರಿಶ್ಚಿಯನ್ ಸಮುದಾಯದಿಂದ ಒಟ್ಟು 8,244 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಕೇಂದ್ರ ಸರ್ಕಾರವು 3,117 ಮಂದಿಗೆ ಪೌರತ್ವ ನೀಡಿದೆ ಎಂದು ಮಾಹಿತಿ ನೀಡಿದರು. ರಾಜ್ಯಸಭೆಯ ಅಧಿಕೃತ ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗಿರುವ ದಾಖಲೆಗಳ ಪ್ರಕಾರ, ಕಳೆದ 5 ವರ್ಷಗಳಲ್ಲಿ 4,177 ಮಂದಿಗೆ ಪೌರತ್ವವನ್ನು ನೀಡಲಾಗಿದೆ.
ಪೌರತ್ವ ತ್ಯಜಿಸಿದ 6 ಲಕ್ಷ ಮಂದಿ
ಕಳೆದ ಐದು ವರ್ಷಗಳಲ್ಲಿ 6 ಲಕ್ಷ ಮಂದಿ ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಸರ್ಕಾರವು ಹೇಳಿತ್ತು. ಹಾಲಿ ವರ್ಷದ ಸೆಪ್ಟೆಂಬರ್ 30ರವರೆಗೆ 1,11,287 ಮಂದಿ ಭಾರತೀಯರು ತಮ್ಮ ಪೌರತ್ವ ತ್ಯಜಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ
2019ರಲ್ಲಿ ಭಾರತೀಯ ಜನತಾ ಪಕ್ಷ ನೇತೃತ್ವದ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿತ್ತು. ಈ ಕಾಯ್ದೆಯು ಜನವರಿ 10, 2020ರಿಂದ ಅನುಷ್ಠಾನಕ್ಕೆ ಬಂದಿತ್ತು. ಈ ಕಾಯ್ದೆಯನ್ವಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಡಿಸೆಂಬರ್ 31, 2014ರವರೆಗೆ ಭಾರತಕ್ಕೆ ವಲಸೆ ಬಂದಿರುವ ಅಲ್ಪಸಂಖ್ಯಾತ ಸಮುದಾಯದವರು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿತ್ತು. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆಗೆ ಇನ್ನಷ್ಟೇ ನಿಯಮಗಳ ಅಧಿಸೂಚನೆ ಹೊರಡಿಸಬೇಕಿದ್ದು, ಅದಕ್ಕಾಗಿ ಕೇಂದ್ರ ಸರ್ಕಾರವು ಅದನ್ನು ಅಳವಡಿಸಲು ಜನವರಿ 2022ರವರೆಗೆ ಸಮಯ ಕೋರಿದೆ.