ಕ್ರೈಂ

200 ಕೋಟಿ ವಂಚಕ ಸುಕೇಶನಿಗಿದೆ ಸೆಲೆಬ್ರಿಟಿಗಳ ಭಾರಿ ಲಿಂಕ್: ಎನ್‌ಸಿಬಿ

ಮುಂಬೈ, ಡಿಸೆಂಬರ್ 20: ಬೆಂಗಳೂರು ಮೂಲದ ವಂಚಕ ಸುಕೇಶ್ ಚಂದ್ರಶೇಖರ್‌ ಜೊತೆ ಸಿನಿಮಾ ಲೋಕದ ಸೆಲೆಬ್ರಿಟಿಗಳ ಸಂಪರ್ಕ ಇರುವುದು ಗುಟ್ಟಾದ ವಿಷಯವೇನಲ್ಲ. ಆದರೆ, ಈಗ 200 ಕೋಟಿ ವಂಚನೆ ಪ್ರಕರಣದ ಆರೋಪಿ ಸುಕೇಶ್ ಜೊತೆ ಸಂಪರ್ಕ ಹೊಂದಿರುವ ಎಲ್ಲಾ ಸೆಲೆಬ್ರಿಟಿಗಳನ್ನು ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯ ಮುಂದಾಗಿರುವ ಸುದ್ದಿ ಬಂದಿದೆ.

ಕಳೆದ ತಿಂಗಳು ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ಮೂಲದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ರನ್ನು 7 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಸುಕೇಶ್ ಚಂದ್ರಶೇಖರ್ ಹಾಗೂ ಆತನ ಪತ್ನಿ ನಟಿ ಲೀನಾ ಮರಿಯಾ ಪೌಲ್ ಉದ್ಯಮಿಯಿಂದ 200 ಕೋಟಿ ಲೂಟಿ ಮಾಡಿದ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಸುಕೇಶ್ ಹಾಗೂ ನಟಿ ಜಾಕ್ವೆಲಿನ್​ ಫರ್ನಾಂಡಿಸ್ ನಡುವೆ ಯಾವುದೇ ರೀತಿಯ ಅಕ್ರಮ ಹಣಕಾಸಿನ ವಹಿವಾಟು ನಡೆದಿದೆಯೇ ಎಂದು ತನಿಖೆ ನಡೆಸಲಾಗುತ್ತಿದೆ.

ಸುಕೇಶ್ ಚಂದ್ರಶೇಖರ್ ತಿಹಾರ್ ಜೈಲಿನಿಂದ ಏಪ್ರಿಲ್-ಜೂನ್‌ನಲ್ಲಿ ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದ. ಈ ವೇಳೆ ಜಾಕ್ವಲಿನ್‌ಗೆ ಮುತ್ತಿಟ್ಟು ಕನ್ನಡಿ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ವೈರಲ್ ಆಗಿತ್ತು. ತಿಹಾರ್ ಜೈಲಿನೊಳಗಿದ್ದುಕೊಂಡೇ ಜಾಕ್ವೆಲಿನ್‍ ಜೊತೆ ಪೋನ್ ಮೂಲಕ ಮಾತಾಡುತ್ತಿದ್ದ. ಾತನನ್ನು ನೋಡಲು ಡಜನ್ ಗಟ್ಟಲೇ ನಟಿಯರು ಬಂದಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ. ಜೈಲಿನೊಳಗೆ ಇದ್ದುಕೊಂಡೇ ಐಷಾರಾಮಿ ಉಡುಗೊರೆಗಳನ್ನು ನಟಿಗೆ ಕಳುಹಿಸಿಕೊಡುತ್ತಿದ್ದ ಎನ್ನಲಾಗಿದೆ.

ವಿಚಾರಣೆ ವೇಳೆ ಸುಕೇಶ್ ನೀಡಿರುವ ಹೇಳಿಕೆಗಳ ಪ್ರಕಾರ, 2015ರಿಂದಲೇ ನಟಿ ಶ್ರದ್ಧಾಕಪೂರ್ ಚೆನ್ನಾಗಿ ಪರಿಚಯ ಎಂದು ತಿಳಿದು ಬರುತ್ತದೆ. ಮಾದಕದ್ರವ್ಯ ನಿಯಂತ್ರಣದಲ್ಲಿ ತೊಡಗಿರುವ ಎನ್ ಸಿ ಬಿ ಬಲೆಗೆ ಬಿದ್ದಿದ್ದ ಶ್ರದ್ಧಾರನ್ನು ಸುಕೇಶ್ ರಕ್ಷಿಸಿದ್ದನಂತೆ. ಜನಪ್ರಿಯ ನಟ ಕಾರ್ತಿಕ್ ಆರ್ಯನ್ ನಟನೆಯ ಕ್ಯಾಪ್ಟನ್ ಚಿತ್ರದ ಸಹ ನಿರ್ಮಾಪಕನಾಗಲು ಸುಕೇಶ್ ಜೊತೆ ಹರ್ಮಾನ್ ಬವೇಜಾ ಮಾತುಕತೆ ನಡೆಸಿದ್ದ ಎಂದು ಸುಕೇಶ್ ಹೇಳಿಕೊಂಡಿದ್ದಾನೆ.

ಪೋರ್ನ್ ವಿಡಿಯೋ ಕೇಸಿನಲ್ಲಿ ಜೈಲುವಾಸಿಯಾಗಿದ್ದ ರಾಜ್ ಕುಂದ್ರಾರನ್ನು ಜೈಲಿನಿಂದ ಹೊರಕ್ಕೆ ತರಲು ಶಿಲ್ಪಾ ಶೆಟ್ಟಿಗೆ ನೆರವಾಗಲು ಆಕೆ ಜೊತೆ ಮಾತುಕತೆ ನಡೆಸಿದ್ದೆ ಎಂದಿದ್ದಾನೆ ಸುಕೇಶ್.

ಸದ್ಯಕ್ಕೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಕ್ವೆಲಿನ್ ಫರ್ನಾಂಡೀಸ್ ಅಲ್ಲದೆ ನೋರಾ ಫತೇಹಿರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇಬ್ಬರಿಗೂ ಐಷಾರಾಮಿ ಕಾರು, ಅತ್ಯಂತ ದುಬಾರಿ ಉಡುಗೊರೆಗಳನ್ನು ಸುಕೇಶ್ ನೀಡಿರುವುದು ಸಾಬೀತಾಗಿದೆ. 200 ಕೋಟಿ ರು ವಂಚನೆ ಪ್ರಕರಣದಲ್ಲಿ ಸುಕೇಶ್ ಅಲ್ಲದೆ ಪತ್ನಿ ಲೀನಾ ಮರಿಯಾ ಪೌಲ್ ರನ್ನು ದೋಷಾರೋಪಣ ಪಟ್ಟಿಯಲ್ಲಿ ಸೇರಿಸಿ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

ದೆಹಲಿ ಜೈಲಿನಲ್ಲಿದ್ದುಕೊಂಡೆ ಬೆದರಿಕೆ ಒಡ್ಡಿ ಹಣ ಗಳಿಸುವುದು, ಪಿಎಂಎಲ್ಎ ಉಲ್ಲಂಘನೆ ಆರೋಪದ ಮೇಲೆ ಸುಕೇಶ್ ವಿರುದ್ಧ ಕ್ರಮ ಜರುಗಿಸಿರುವುದಾಗಿ ಜಾರಿ ನಿರ್ದೇಶನಾಲಯ ಹೇಳಿದೆ. ಪಿಎಂಎಲ್ಎ ಕಾಯ್ದೆ ಸೆಕ್ಷನ್ 17ರ ಅಡಿಯಲ್ಲಿ 16 ಹೈ ಎಂಡ್ ವಾಹನಗಳನ್ನು ಜಪ್ತಿ ಮಾಡಲಾಗಿದೆ. ದೆಹಲಿ ಪೊಲೀಸರು ಕೂಡಾ ಈ ದಂಪತಿ ವಿರುದ್ಧ ಹಲವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಖ್ಯವಾಗಿ Ranbaxy ಪ್ರವರ್ತಕರಾದ ಶಿವಿಂದರ್ ಸಿಂಗ್ ಹಾಗೂ ಮಳ್ವಿಂದರ್ ಸಿಂಗ್ ಅವರಿಗೆ 200 ಕೋಟಿ ರು ವಂಚನೆ ಪ್ರಕರಣ ಸೇರಿದೆ. ಮಹಾರಾಷ್ಟ್ರ ಪೊಲೀಸರು MCOCA ಕಾಯ್ದೆ ಅನ್ವಯ ತನಿಖೆ ಮುಂದುವರೆಸಿದ್ದಾರೆ.

ಬೆಂಗಳೂರು ಮೂಲದ ಸುಕೇಶ್

ಬೆಂಗಳೂರಿನ ಭವಾನಿ ನಗರದ ನಿವಾಸಿ ಸುಕೇಶ್ ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ಇತ್ತೀಚೆಗೆ ಈತನ ತಂದೆ ವಿಜಯನ್ ಚಂದ್ರಶೇಖರ್ ನಿಧನರಾದರು. ಪಿಯುಸಿ ತನಕ ವ್ಯಾಸಂಗ ಮಾಡಿದ ಸುಕೇಶ್ ನಂತರ ದುಷ್ಕೃತ್ಯಗಳತ್ತ ತನ್ನ ಗಮನ ಹರಿಸಿದ. ಕಾರ್ ರೇಸ್ ಆಯೋಜಕರ ಸಂಪರ್ಕ ಸಾಧಿಸಿ, ಇವೆಂಟ್ ಮ್ಯಾನೇಜ್ಮೆಂಟ್ ಬಗ್ಗೆ ತಿಳಿದು ಕೊಂಡ. 17ನೇ ವಯಸ್ಸಿಗೆ ವಂಚನೆಯ ಮೊದಲ ಅಧ್ಯಾಯ ಆರಂಭಿಸಿ ಬಿಟ್ಟಿದ್ದ. ಸರ್ಕಾರ ಅಧಿಕಾರಿ ಎಂದೇಳಿ ಫೋನ್ ಕಾಲ್ ಮಾಡಿ ಬೆದರಿಸಿ ಹಣ ಗಳಿಸುತ್ತಿದ್ದ. ಹೀಗೆ ಸುಮಾರು 100 ಕ್ಕೂ ಅಧಿಕ ಮಂದಿಗೆ ವಂಚನೆ ಮಾಡಿದ, ಬಿಡಿಎ ಅಧಿಕಾರಿ ಎಂದು ಹೇಳಿಕೊಂಡು ವಂಚನೆ ಮಾಡುತ್ತಿದ್ದ ಸುಕೇಶನನ್ನು 2007ರಲ್ಲಿ ಬನ್ನೇರುಘಟ್ಟ ಪೊಲೀಸರು ಬಂಧಿಸಿದರು. ಆದರೆ, ಜೈಲಿಗೆ ಹೋಗಿ ಬಂದ ಬಳಿಕ ತನ್ನ ಜಾಲವನ್ನು ಮತ್ತಷ್ಟು ವಿಸ್ತರಿಸಿಕೊಂಡು ದೊಡ್ಡ ಪ್ರಮಾಣದಲ್ಲಿ ಬೆದರಿಕೆ, ವಂಚನೆ ಮುಂದುವರೆಸತೊಡಗಿದ. ಸನ್ ಟಿವಿ ಮಾಲೀಕ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಕುಟುಂಬಕ್ಕೆ ಬೇಕಾದವನು ಎಂದು ಹೇಳಿಕೊಂಡು ಜಾಕ್ವೆಲಿನ್ ಫರ್ನಾಂಡೀಸ್ ಸಂಪರ್ಕ ಸಾಧಿಸಿದ. ಗೃಹ ಸಚಿವ ಅಮಿತ್ ಶಾ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡು ಕೂಡಾ ಅನೇಕರಿಗೆ ಕರೆ ಮಾಡಿದ್ದಾನೆ. ಸದ್ಯ ಈತನ ವಿರುದ್ಧ 15ಕ್ಕೂ ಹೆಚ್ಚು ಎಫ್ಐಆರ್ ದಾಖಲಾಗಿದ್ದು, ಜೈಲಿನಲ್ಲಿದ್ದಾನೆ.

Related Articles

Leave a Reply

Your email address will not be published. Required fields are marked *

Back to top button