ಇತ್ತೀಚಿನ ಸುದ್ದಿ

ಕೇರಳದಲ್ಲಿ ಮತ್ತೆ ಹಕ್ಕಿ ಜ್ವರ: ಚಾಮರಾಜನಗರದ ಗಡಿಯಲ್ಲಿ ಕಟ್ಟೆಚ್ಚರ..!

ಚಾಮರಾಜನಗರ, ಡಿಸೆಂಬರ್ 16; ಕೊರೊನಾ ಸೋಂಕು ಮತ್ತು ಕೋವಿಡ್ ರೂಪಾಂತರಿ ಓಮಿಕ್ರಾನ್ ಭೀತಿ ನಡುವೆಯೇ ಕೇರಳದಲ್ಲಿ ಮತ್ತೆ ಹಕ್ಕಿಜ್ವರ ಕಾಣಿಸಿಕೊಂಡಿದೆ. ಇದರಿಂದಾಗಿ ಚಾಮರಾಜನಗರದ ಗಡಿಭಾಗದಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಜಿಲ್ಲಾಡಳಿತ ಕೈಗೊಂಡಿದ್ದು, ಕೋಳಿ ಸಾಗಾಣಿಕಾ ವಾಹನಗಳ ಮೇಲೆ ತೀವ್ರ ನಿಗಾವಹಿಸಲಾಗುತ್ತಿದೆ

ಕೆಲವು ತಿಂಗಳ ಹಿಂದೆಯಷ್ಟೆ ಹಕ್ಕಿಜ್ವರ ಕಾಣಿಸಿಕೊಂಡಿತ್ತಾದರೂ ಅದು ತಹಬದಿಗೆ ಬಂದಿತ್ತು. ಈಗ ಮತ್ತೆ ಕೇರಳದಲ್ಲಿ ಹಕ್ಕಿ ಜ್ವರ ಬಂದಿದ್ದು ಇದರಿಂದ ಕೇರಳದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಚಾಮರಾಜನಗರದ ಚೆಕ್ ಪೋಸ್ಟ್‌ಗಳಲ್ಲಿ ಕಠಿಣ ತಪಾಸಣೆಯನ್ನು ಮಾಡಲಾಗುತ್ತಿದೆ. ಇದೀಗ ಜಿಲ್ಲೆಯಲ್ಲಿರುವ ಕೇರಳ ಮತ್ತು ತಮಿಳುನಾಡು ಗಡಿ ಭಾಗದ ಚೆಕ್ ಪೋಸ್ಟ್ ಗಳತ್ತ ಹದ್ದಿನ ಕಣ್ಣಿಟ್ಟಿಟ್ಟು ಕಾಯಲಾಗುತ್ತಿದ್ದು, ಹೊರ ರಾಜ್ಯದಿಂದ ಬರುವವರನ್ನು ಕಠಿಣ ತಪಾಸಣೆಗೆ ಒಳಪಡಿಸಿ, ಕೋಳಿ ಸಾಗಾಣಿಕೆ ಮಾಡುವ ವಾಹನಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ.

ಕೇರಳದಲ್ಲಿ ಕೊರೊನಾ ಸೋಂಕು ಬಾಧಿಸುತ್ತಿರುವಾಗಲೇ ರೂಪಾಂತರಿ ಓಮಿಕ್ರಾನ್ ಕಾಣಿಸಿಕೊಂಡು ಜನರನ್ನು ಆತಂಕಕ್ಕೆ ತಳ್ಳಿತ್ತು. ಅದು ಸಾಲದೆಂಬಂತೆ ಇದೀಗ ಮತ್ತೆ ಹಕ್ಕಿ ಜ್ವರವೂ ಬೆಳಕಿಗೆ ಬಂದಿರುವುದು ಕೇರಳ ಮಾತ್ರವಲ್ಲದೆ, ಚಾಮರಾಜನಗರದ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ಜಿಲ್ಲೆಯ ಬಹಳಷ್ಟು ಜನ ಹಲವು ಕಾರಣಗಳಿಗೆ ಕೇರಳದೊಂದಿಗೆ ನಂಟು ಹೊಂದಿದ್ದು, ಅಲ್ಲಿ ಯಾವುದೇ ಸೋಂಕು ಕಾಣಿಸಿಕೊಂಡರೂ ಅದರ ಪರಿಣಾಮ ಜಿಲ್ಲೆಯ ಮೇಲಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಗಡಿಭಾಗಗಳ ಮೂಲಕ ರಾಜ್ಯವನ್ನು ಪ್ರವೇಶಿಸುವುದರಿಂದ ಯಾವುದೇ ರೀತಿಯ ಸೋಂಕುಗಳು ಎಲ್ಲಿಯೇ ಕಾಣಿಸಿಕೊಂಡರೂ ಆತಂಕ ಪಡಬೇಕಾದ ಪರಿಸ್ಥಿತಿ ರಾಜ್ಯದ್ದಾಗಿದೆ. ಹೊರ ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಕಾರಣ ಸೋಂಕುಗಳು ಹೇಗೆ ಬೇಕಾದರೂ ಬರುವ ಸಾಧ್ಯತೆ ಇರುವುದರಿಂದ ಗಡಿಭಾಗದಲ್ಲಿನ ಜನ ಎಚ್ಚೆತ್ತುಕೊಳ್ಳುವುದು ಅನಿವಾರ್ಯವಾಗಿದೆ.

ಜಿಲ್ಲೆ ಪ್ರವೇಶಿಸುವ ಜನರು

ಈ ಬಾರಿ ಅಕಾಲಿಕ ಮಳೆ ಜನರನ್ನು ಮತ್ತು ರೈತರನ್ನು ನಿದ್ದೆಗೆಡಿಸಿತ್ತು. ವರ್ಷದ ಕೊನೆಯ ವೇಳೆಗೆ ಕೊರೊನಾ ಸೋಂಕು ಕುಸಿತಗೊಂಡು ಎಲ್ಲವೂ ಯಥಾ ಸ್ಥಿತಿಗೆ ಮರಳುವ ನಿರೀಕ್ಷೆಯಲ್ಲಿದ್ದಾಗಲೇ ಓಮಿಕ್ರಾನ್ ರಾಜ್ಯದಲ್ಲಿ ಭೀತಿಯನ್ನುಂಟು ಮಾಡಿದೆ. ಸಾಮಾನ್ಯವಾಗಿ ಡಿಸೆಂಬರ್ ತಿಂಗಳಲ್ಲಿ ಪ್ರವಾಸಿಗರು ಒಂದೆಡೆಯಿಂದ ಮತ್ತೊಂದೆಡೆಗೆ ಪ್ರವಾಸ ತೆರಳುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದರಲ್ಲೂ ವರ್ಷಾಚರಣೆಗೆಂದೇ ತಮಿಳುನಾಡು, ಕೇರಳದಿಂದ ಚಾಮರಾಜನಗರ ಮಾರ್ಗವಾಗಿ ಮೈಸೂರು, ಕೊಡಗಿನತ್ತ ತೆರಳುವವರ ಸಂಖ್ಯೆಯೂ ತುಸು ಹೆಚ್ಚಾಗಿಯೇ ಇದೆ. ಹೀಗಾಗಿ ಹೊರಗಿನಿಂದ ಜಿಲ್ಲೆಯನ್ನು ಪ್ರವೇಶಿಸುವವರ ಮೇಲೆ ಗಮನಹರಿಸಬೇಕಾಗಿದೆ.

ಈಗ ಓಮಿಕ್ರಾನ್ ನ ಸರದಿ

ಕೋವಿಡ್ ಮೊದಲ ಅಲೆಯಲ್ಲಿ ಮಾಡಿದ ಲಾಕ್‌ಡೌನ್‌ನಿಂದ ಮತ್ತು ಗಡಿಯಲ್ಲಿ ಕಠಿಣ ಕ್ರಮ ಕೈಗೊಂಡಿದ್ದರಿಂದ ಪ್ರವಾಸಿಗರು ಒಂದೆಡೆಯಿಂದ ಮತ್ತೊಂಡೆಗೆ ಹೋಗಿರಲಿಲ್ಲ. ಬಳಿಕ ಒಂದಷ್ಟು ವಿನಾಯಿತಿ ಮಾಡಲಾಯಿತಾದರೂ ಅದನ್ನು ಕೆಲವರು ದುರುಪಯೋಗ ಪಡಿಸಿಕೊಂಡಿದ್ದರಿಂದ ಎರಡನೇ ಅಲೆಯ ಭೀಕರತೆಯನ್ನು ಎಲ್ಲರೂ ಅನುಭವಿಸುವಂತಾಯಿತು. ಮೂರನೇ ಅಲೆಯ ಭಯದಲ್ಲಿ ಕಾಲ ಕಳೆಯುವಾಗಲೇ ಕೊರೊನಾದೊಂದಿಗೆ ಡೆಲ್ಟ್‌ ಫ್ಲಸ್, ಬ್ಲಾಕ್ ಫಂಗಸ್‌ನಂತಹ ಕೊರೊನಾ ರೂಪಾಂತರಿಗಳು ಕಾಡಿದವು. ಈಗ ಓಮಿಕ್ರಾನ್ ಸರದಿ.

ಹಕ್ಕಿ ಜ್ಚರ ತಡೆಗೆ ಜಿಲ್ಲಾಡಳಿತ ಅಲರ್ಟ್

ಚಾಮರಾಜನಗರ ನೆರೆಯ ಕೇರಳದ ಕುಟ್ಟನಾಡ್ ಪ್ರದೇಶದಲ್ಲಿ ಹಕ್ಕಿಜ್ವರ ದೃಢಪಟ್ಟಿದ್ದು ಮತ್ತೊಂದು ಸಂಕಷ್ಟವನ್ನು ತಂದೊಡ್ಡುತ್ತಾ ಎಂದು ಜನ ಭಯದ ಕಣ್ಣಿನಲ್ಲಿ ನೋಡುವಂತಾಗಿದೆ. ಜತೆಗೆ ಕರ್ನಾಟಕ -ಕೇರಳ ರಾಜ್ಯಗಳ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹಕ್ಕಿ ಜ್ವರದ ಭೀತಿಯನ್ನು ಹುಟ್ಟು ಹಾಕಿದೆ. ಆದರೆ ಕೇರಳದಲ್ಲಿ ಹಕ್ಕಿಜ್ವರ ದೃಢಪಡುತ್ತಿದ್ದಂತೆಯೇ ಜಿಲ್ಲಾಡಳಿತ ಅಲರ್ಟ್ ಆಗಿದ್ದು, ಕೇರಳ ಕರ್ನಾಟಕ ಗಡಿಭಾಗ ಚಾಮರಾಜನಗರ ಜಿಲ್ಲೆಯ ಮೂಲೆಹೊಳೆಯಲ್ಲಿ ಕಟ್ಟೆಚ್ಚರ ವಹಿಸಿದ್ದು ಮುಖ್ಯವಾಗಿ ಕೋಳಿ ಸಾಗಾಣಿಕೆ ವಾಹನಗಳ ಮೇಲೆ ತೀವ್ರ ನಿಗಾ ವಹಿಸಿದೆ.

ಆರೋಗ್ಯದತ್ತ ಕಾಳಜಿ ಅಗತ್ಯ

ಪಶು ಮತ್ತು ವೈದ್ಯಕೀಯ ಇಲಾಖೆಯು ಈ ಬಗ್ಗೆ ಹೆಚ್ಚಿನ ಗಮನನೀಡಿದ್ದು, ಸೋಂಕು ಪೀಡಿತ ಹಕ್ಕಿಗಳನ್ನು, ಸೋಂಕಿತ ಕೋಳಿ ಮತ್ತು ಬಾತು ಕೋಳಿಗಳನ್ನು ಕೊಲ್ಲಲು ಆದೇಶ ಹೊರಡಿಸಲಾಗಿದೆ. ಕೇರಳದಿಂದ ಬರುವ ಕೋಳಿ ಸಾಗಾಣಿಕೆ ಲಾರಿ ಸೇರಿದಂತೆ ವಾಹನಗಳನ್ನು ತಪಾಸಣೆ ಮಾಡಿ ಬಳಿಕ ಸ್ಯಾನಿಟೈಸ್ ಮಾಡಲಾಗುತ್ತಿದೆ. ಕೇರಳದಲ್ಲಿ ಒಂದೇ ವರ್ಷದಲ್ಲಿ ಎರಡನೇ ಬಾರಿಗೆ ಹಕ್ಕಿ ಜ್ವರ ಕಾಣಿಸಿಕೊಳ್ಳುತ್ತಿರುವುದರಿಂದ ಒಂದಷ್ಟು ಆತಂಕವಂತು ಇದ್ದೇ ಇದೆ. ಆದ್ದರಿಂದ ಸಾರ್ವಜನಿಕರು ಈ ಬಗ್ಗೆ ಹೆಚ್ಚಿನ ಗಮನಹರಿಸಿ ಆರೋಗ್ಯದತ್ತ ಕಾಳಜಿ ವಹಿಸುವುದು ಬಹು ಮುಖ್ಯವಾಗಿದೆ.

Related Articles

Leave a Reply

Your email address will not be published. Required fields are marked *

Back to top button