ಭಾರತಕ್ಕೆ ಸರಣಿ ಜಯ..
ಮುಂಬೈ, ಡಿ.6- ಸ್ಪಿನ್ ದಾಳಿಗೆ ತತ್ತರಿಸಿ ಹೋದ ನ್ಯೂಜಿಲೆಂಡ್ ಪ್ರತಿರೋಧ ತೋರದೆ ಭಾರತಕ್ಕೆ ಶರಣಾಗಿದೆ. ಇಲ್ಲಿನ ವಾಖೆಂಡೆ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ನಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಕೊಹ್ಲಿ ಬಳಗ ನ್ಯೂಜಿಲೆಂಡ್ ಅನ್ನು ಸ್ಪಿನ್ ಮೂಲಕ ಕಟ್ಟಿ ಹಾಕುವ ಮೂಲಕ 373 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಮೂರನೆ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 160 ರನ್ ದಾಖಲಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಇಂದು ನಾಲ್ಕನೆ ದಿನದಾಟ ಆರಂಭಿಸಿದ ನಿಕೋಲ್ಸ್ ಮತ್ತು ರವೀಂದ್ರ ಜೋಡಿ ಹೇಗಾದರೂ ಮಾಡಿ ತಂಡವನ್ನು ಪಾರು ಮಾಡಲು ದೊಡ್ಡ ಸವಾಲಿನ ನಡುವೆಯೂ ಪ್ರಯಾಸಪಟ್ಟರು.
ಆದರೆ ದಿನದ ಆರಂಭದಲ್ಲೇ ನಾಯಕ ವಿರಾಟ್ ಕೊಹ್ಲಿ ಸ್ಪಿನ್ ದಾಳಿಗೆ ನಿರ್ಧರಿಸಿ ಜಯಂತ್ ಯಾದವ್ ಮತ್ತು ಅಶ್ವಿನ್ ಅವರಿಗೆ ವಿಕೆಟ್ ಉರುಳಿಸುವ ಜವಾಬ್ದಾರಿ ನೀಡಿದರು. ಅದರಂತೆ ಚಾಚೂ ತಪ್ಪದೆ ಈ ಜೋಡಿ ಒಬ್ಬರ ನಂತರ ಒಬ್ಬರು ಮೇಲುಗೈ ಸಾಧಿಸಿ ಕೇವಲ 45 ನಿಮಿಷದಲ್ಲೇ ನ್ಯೂಜಿಲೆಂಡ್ ಸರ್ವ ಪತನವಾಗುವಂತೆ ಮಾಡಿದರು.
ನ್ಯೂಜಿಲೆಂಡ್ ದ್ವಿತೀಯ ಇನ್ನಿಂಗ್ಸ್ನಲ್ಲಿ 167 ರನ್ ಕಲೆ ಹಾಕಲು ಮಾತ್ರ ಸಾಧ್ಯವಾದರೆ, ನಿಕೋಲ್ಸ್ ಮಾತ್ರ ಕೊನೆಯವರೆಗೂ ಹೋರಾಟ ನಡೆಸಿ ಅಂತಿಮವಾಗಿ ಅವರೇ ಅಶ್ವಿನ್ ಅವರ ಬೌಲಿಂಗ್ನಲ್ಲಿ ಆವೇಶಕ್ಕೆ ಬಿದ್ದು ಚೆಂಡನ್ನು ಬೌಂಡರಿಗೆ ಅಟ್ಟುವ ಭರದಲ್ಲಿ ಸ್ಟಂಪ್ ಔಟ್ ಆಗಿ ನಿರ್ಗಮಿಸಿದಾಗ ನ್ಯೂಜಿಲೆಂಡ್ ಹೀನಾಯ ಸೋಲು ದಾಖಲಿಸಿತು.
ಈ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದಲ್ಲಿ ಜಯ ಸಾಧಿಸುವ ಮೂಲಕ ಪ್ರಾಬಲ್ಯ ಮೆರೆದು ಸರಣಿಯನ್ನು ಗೆಲ್ಲುವ ಮೂಲಕ ದಿಗ್ವಿಜಯ ಸಾಧಿಸಿದೆ. ಒಟ್ಟಾರೆ ಮೊದಲೆರಡು ದಿನದಲ್ಲಿ ನ್ಯೂಜಿಲೆಂಡ್ನ ಸ್ಪಿನ್ನರ್ ಅಜಾಜ್ ಪಟೇಲ್ 10 ವಿಕೆಟ್ ಪಡೆಯುವ ಮೂಲಕ ದಾಖಲೆ ಬರೆದು, ಖುಷಿ ಪಟ್ಟಿದ್ದನ್ನು ಬಿಟ್ಟರೆ ಇನ್ನು ಉಳಿದ ಎಲ್ಲಾ ರಂಗದಲ್ಲೂ ಕಳಪೆ ಪ್ರದರ್ಶನ ಎದ್ದು ಕಾಣುತ್ತಿತ್ತು.
ಮುಂಬೈ ಅಂಗಳದಲ್ಲಿ ಅಶ್ವಿನ್ , ಜಯಂತ್ ಪಟೇಲ್ ಅವರ ಬೌಲಿಂಗ್ನಲ್ಲಿ ಚೆಂಡು ಲಯಕ್ಕೆ ತಕ್ಕಂತೆ ತಿರುಗಿ ಬ್ಯಾಟ್ಸ್ಮೆನ್ಗಳಲ್ಲಿ ರನ್ ಗಳಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಿಸಿದ್ದು ಮಾತ್ರ ವಿಶೇಷ.
ಸಂಕ್ಷಿಪ್ತ ಸ್ಕೋರ್
ಭಾರತ ಮೊದಲ ಇನ್ನಿಂಗ್ಸ್ 325 ಮತ್ತು ದ್ವಿತೀಯ ಇನ್ನಿಂಗ್ಸ್ 276 ಡಿಕ್ಲೇರ್.
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 62, ದ್ವಿತೀಯ ಇನ್ನಿಂಗ್ಸ್ 167.
ಭಾರತದ ಪರ ಅಶ್ವಿನ್ ಈ ಪಂದ್ಯದಲ್ಲಿ 8 ವಿಕೆಟ್ಗಳನ್ನು ಪಡೆದರೆ ಜಯಂತ್ ಯಾದವ್ ಕೂಡ ಸರಿಸಾಟಿಯಾಗಿ 5 ವಿಕೆಟ್ ಪಡೆದು ಮಿಂಚಿದ್ದಾರೆ.