ಓಮಿಕ್ರಾನ್ ಸೋಂಕು ಕಂಡುಬಂದರೆ ಬಿಗಿ ಕ್ರಮ ಖಚಿತ : ಸಚಿವ ಅಶೋಕ್..
ಬೆಂಗಳೂರು, ಡಿ.1- ಒಂದು ವೇಳೆ ರಾಜ್ಯದಲ್ಲಿ ದಕ್ಷಿಣ ಆಫ್ರಿಕಾ ಖಂಡದ ಬೋಟ್ಸಾವಾನಾದಲ್ಲಿ ಕಂಡುಬಂದಿರುವ ಓಮಿಕ್ರಾನ್ ಸೋಂಕು ನಮ್ಮಲ್ಲೂ ಕಂಡುಬಂದರೆ ಅನಿವಾರ್ಯವಾಗಿ ಬಿಗಿ ಕ್ರಮ ಕೈಗೊಳ್ಳುವುದು ಖಚಿತ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಪ್ರಾಣ ರಕ್ಷಣೆ ಮಾಡುವುದು ಚುನಾಯಿತ ಸರ್ಕಾರದ ಕರ್ತವ್ಯ. ಒಂದು ವೇಳೆ ಈ ಸೋಂಕು ಯಾರಿಗಾದರೂ ಕಂಡುಬಂದರೆ ತಕ್ಷಣವೇ ನಾವು ಬಿಗಿಯಾದ ಕ್ರಮಗಳನ್ನು ಜರುಗಿಸುತ್ತೇವೆ ಎಂಬ ಸುಳಿವು ನೀಡಿದರು.
ದಕ್ಷಿಣ ಆಫ್ರಿಕಾದಿಂದ ಬಂದಿರುವ ವ್ಯಕ್ತಿಯೊಬ್ಬರಿಗೆ ವಿಭಿನ್ನವಾದ ಸೋಂಕು ಕಾಣಿಸಿಕೊಂಡಿದೆ. ಅದರ ವರದಿ ಬಂದು ಒಂದು ವೇಳೆ ಓಮಿಕ್ರಾನ್ ಸೋಂಕು ಎಂದು ಖಚಿತವಾದರೆ ಬಿಗಿ ಕ್ರಮ ಅನಿವಾರ್ಯ ಎಂದರು. ಅದೃಷ್ಟವಶಾತ್ ಈವರೆಗೂ ಅದು ಯಾವ ತಳಿ ಎಂಬುದು ಖಚಿತವಾಗಿಲ್ಲ. ಐಸಿಎಂಆರ್‍ನಿಂದ ನಮಗೆ ವರದಿ ಬರಬೇಕು. ಆದರೂ ಸರ್ಕಾರ ಮುಂಜಾಗ್ರತೆಯಾಗಿ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಎಲ್ಲವನ್ನೂ ತೆಗೆದುಕೊಂಡಿದೆ ಎಂದು ಹೇಳಿದರು.
ನಮಗೆ ಒಂದು ಮತ್ತು ಎರಡನೆ ಆಲೆ ಸಾಕಷ್ಟು ಪಾಠ ಕಲಿಸಿದೆ. ಹೀಗಾಗಿ ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಲೇಬೇಕಾಗುತ್ತದೆ. ಜನರ ಜೀವ ರಕ್ಷಣೆ ಮಾಡುವುದು ಮುಖ್ಯ. ನಾನು ವಿಪತ್ತು ನಿರ್ವಹಣೆಯ ಉಪಾಧ್ಯಕ್ಷನಾಗಿರುವುದರಿಂದ ನನಗೆ ಕ್ರಮಗಳನ್ನು ತೆಗೆದುಕೊಳ್ಳುವ ಜವಾಬ್ದಾರಿ ಇದೆ ಎಂದು ತಿಳಿಸಿದರು.
ದಕ್ಷಿಣ ಆಫ್ರಿಕಾ ಪ್ರಜೆಯ ರೋಗ ವಿಭಿನ್ನವಾಗಿದೆ. ಅದು ಯಾವ ಸೋಂಕು ಎಂದು ಈವರೆಗೂ ದೃಢಪಟ್ಟಿಲ್ಲ. ಈಗಾಗಲೇ ನಾವು ವಿಮಾನ ನಿಲ್ದಾಣ, ಗಡಿ ಭಾಗಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು. ದೇಶದಲ್ಲಾಗಲಿ ಅಥವಾ ರಾಜ್ಯದಲ್ಲಾಗಲಿ ಸೋಂಕು ಕಾಣಿಸಿಕೊಂಡಿಲ್ಲ ಎಂಬುದೇ ಸಮಾಧಾನಕರ ಅಂಶ. ಭಾರತಕ್ಕೆ ಇದು ಬಂದಿಲ್ಲ ಎಂದು ನಿನ್ನೆಯಷ್ಟೆ ಸಂಸತ್ತಿನಲ್ಲಿ ಕೇಂದ್ರ ಸಚಿವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರ್ಕಾರವು ಕೇಂದ್ರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದೆ. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಡಾ.ಕೆ.ಸುಧಾಕರ್ ಅವರುಗಳು ತಜ್ಞರು ಮತ್ತು ಅಕಾರಿಗಳೊಂದಿಗೆ ಸಭೆ ನಡೆಸಿ ಮುಂಜಾಗ್ರತೆಯಾಗಿ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.
ನಾವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಜಿಲ್ಲಾಕಾರಿಗಳ ಜತೆ ಈಗಾಗಲೇ ನಾನೇ ದೂರವಾಣಿ ಮೂಲಕ ಮಾತನಾಡಿ ಬಿಗಿ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚನೆ ಕೊಟ್ಟಿದ್ದೇನೆ. ವಿಶೇಷವಾಗಿ ಕೇರಳ ಮತ್ತು ಮಹಾರಾಷ್ಟ್ರ ಗಡಿ ಭಾಗಗಳಲ್ಲಿ ಹೆಚ್ಚಿನ ತಪಾಸಣೆ ನಡೆಸಲು ಸೂಚನೆ ನೀಡಿರುವುದಾಗಿ ವಿವರಿಸಿದರು.
ಅಧಿವೇಶನ ರದ್ದಾಗಲ್ಲ: ಇದೇ ತಿಂಗಳ 13ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಈಗಾಗಲೇ ನಿಗದಿಯಾಗಿರುವಂತೆ ನಡೆಯಲಿದೆ ಎಂದು ಅಶೋಕ್ ಪ್ರಶ್ನೆಯೊಂದಕ್ಕೆ ಸ್ಪಷ್ಟ ಉತ್ತರ ನೀಡಿದರು.
ಯಾವುದೇ ಕಾರಣಕ್ಕೂ ಅಧಿವೇಶನವನ್ನು ರದ್ದುಪಡಿಸುವುದಿಲ್ಲ, ನಿಗದಿಯಂತೆಯೇ ನಡೆಸಲಾಗುವುದು. ಕೋವಿಡ್ ಮಾರ್ಗಸೂಚಿ ಹಾಗೂ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ. ವಿಧಾನಮಂಡಲದ ಉಭಯ ಸದನಗಳ ಸಭಾಧ್ಯಕ್ಷರು ಮತ್ತು ಸಭಾಪತಿಗಳ ಜತೆಯೂ ಸಿಎಂ ಚರ್ಚಿಸಲಿದ್ದಾರೆ. ಅಧಿವೇಶನವನ್ನು ಸರ್ಕಾರ ನಡೆಸೇ ತೀರುತ್ತದೆ ಎಂದು ಅಶೋಕ್ ಗೊಂದಲಗಳಿಗೆ ತೆರೆ ಎಳೆದರು.