ಮಹಿಳಾ ಫುಟ್ಬಾಲ್ ಟೂರ್ನಿ : ಬ್ರೆಜಿಲ್ಗೆ ಮಣಿದ ಭಾರತ..
ಮನಾಸ್(ಬ್ರೆಜಿಲ್),ನ.26- ಭಾರತೀಯ ಮಹಿಳಾ ಫುಟ್ಬಾಲ್ ತಂಡವು ನಾಲ್ಕು ರಾಷ್ಟ್ರಗಳ ಫುಟ್ಬಾಲ್ ಪಂದ್ಯಾವಳಿಯ ತನ್ನ ಮೊದಲ ಪಂದ್ಯದಲ್ಲಿ ಒಂದು ಗೋಲ್ಗಳಿಸಿ ಮೊದಲರ್ಧದ ಅವಧಿಯಲ್ಲಿ ಬಲಾಢ್ಯ ಬ್ರೆಜಿಲ್ಅನ್ನು ನಿಯಂತ್ರಿಸಿತಾದರೂ ಅಂತಿಮವಾಗಿ 1-6ರಿಂದ ಪರಾಭವಗೊಂಡಿತು.
ಪಂದ್ಯದ ಮೊದಲ ನಿಮಿಷವೇ 2007ರ ವಿಶ್ವಕಪ್ ರನ್ನರ್ಸ್ ಅಪ್ ತಂಡಕ್ಕೆ ಡೆಬೋರಾ ಒಲಿವೀರಾ ಅವರು ಮುನ್ನಡೆ ಕೊಡಿಸಿದ ಬಳಿಕ ಮನಿಷಾ ಕಲ್ಯಾಣ್ ಅವರು 8ನೇ ನಿಮಿಷದಲ್ಲಿ ಭಾರತದ ಪರ ಗೋಲುಹೊಡೆದು ಸಮಬಲ ತಂದರು. 36ನೇ ನಿಮಿಷದಲ್ಲಿ ಆತಿಥೇಯ ತಂಡ ಬ್ರೆಜಿಲ್ಗೆ ಜಿಯೋವಾ ನಾ ಕೋಸ್ಟಾ ಮತ್ತೆ ಮುನ್ನಡೆ ತಂದರು.
ಹೀಗಿದ್ದರೂ ಬ್ರೆಜಿಲ್ ದ್ವಿತೀಯಾರ್ಧದಲ್ಲಿ ಅರಿಯಾಡಿನಾ ಬೋರ್ಗೆಸ್ (52ನೇ ನಿಮಿ), ಕೆರೋಲಿನ್ ಫೆರೀರಾ (54ನೇ ನಿಮಿಷ), ಗೈಸೆ ಫೆರೀರಾ (76ನೇ ನಿಮಿಷ) ಮತ್ತು ಅರಿಯಾಡಿನಾ ಬೋರ್ಗೆಸ್ (81ನೇ ನಿಮಿಷ) ನಾಲ್ಕು ಗೋಲುಗಳನ್ನು ಬಾರಿಸುವುದರೊಂದಿಗೆ ಟೆನ್ನಿಸ್ ಸ್ಕೋರ್ನ ಮಾದರಿಯ ಮುನ್ನಡೆಯೊಂದಿಗೆ ಪಂದ್ಯವನ್ನು ಗೆದ್ದುಬೀಗಿತು.
ಈ ಪಂದ್ಯವು 43 ವರ್ಷ ವಯಸ್ಸಿನ ದಂತಕತೆಯಾಗಿರುವ ಮಿಡ್ಫೀಲ್ಡರ್ ಫಾರ್ಮಿಗಾ ಅವರಿಗೆ ಕಡೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. 26 ವರ್ಷಗಳಲ್ಲಿ ಬ್ರೆಜಿಲ್ ಪರ 2ಯುಎಸ್ ಪಂದ್ಯಗಳನ್ನಾಡಿರುವ ಅವರು ಏಳು ಒಲಿಂಪಿಕ್ಸ್ಗಳಲ್ಲಿ ಹಾಗೂ ಏಳು ವಿಶ್ವಕಪ್ಗಳಲ್ಲಿ ಪಾಲ್ಗೊಂಡವರು.
ಅವರು 2007ರ ವಿಶ್ವಕಪ್ ಬೆಳ್ಳಿಪದಕ ವಿಜೇತ ಬ್ರೆಜಿಲ್ ತಂಡದ ಭಾಗವಾಗಿದ್ದರು. ಶುಕ್ರವಾರ ಅದೇನಾ ಡಾ ಅಮೆಜಾನಿಯಾದಲ್ಲಿ ನಡೆದ ಪಂದ್ಯದಲ್ಲಿ ಕೇವಲ 15 ನಿಮಿಷಗಳು ಇರುವಾಗ ಅವರು ಬದಲಿ ಆಟಗಾರ್ತಿಯಾಗಿ ಆಡಿದ್ದರು. ಭಾರತವು ಚಿಲಿ(ನವೆಂಬರ್ 29) ಮತ್ತು ವೆನಿಜುವೆಲಾ (ಡಿಸೆಂಬರ್ 2) ತಂಡಗಳ ವಿರುದ್ಧ ಮುಂದಿನ ಪಂದ್ಯಗಳನ್ನು ಆಡಲಿದೆ.