ರಾಜ್ಯ

ಪ್ರತಿಷ್ಠೆಯಾದ ಪರಿಷತ್ ಚುನಾವಣೆ :

ಬೆಂಗಳೂರು : ಹಿರಿಯರ ಚಿಂತಕರ ಚಾವಡಿ ಎಂದೆ ಕರೆಸಿಕೊಳ್ಳುವ ಮೇಲ್ಮನೆಯ 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆ ಮೂರು ಪಕ್ಷಗಳ ನಾಯಕರಿಗೆ ಪ್ರತಿಷ್ಠೆಯ ಕಣವಾಗಿದೆ.

ಈಗಾಗಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮುಗಿಸಿ ತಮ್ಮ ತಮ್ಮ ವ್ಯಾಪ್ತಿಯ ಮತದಾರರನ್ನು ಓಲೈಸುವ ಕಸರತ್ತಿನಲ್ಲಿ ಅಭ್ಯರ್ಥಿಗಳು ತೊಡಗಿದ್ದಾರೆ. ಪರಿಷತ್ ಚುನಾವಣೆ ಜಾತಿ ಲೆಕ್ಕಾಚಾರ, ಪ್ರಭಾವ, ಹಿರಿತನಕ್ಕಿಂತ ಮುಖ್ಯವಾಗಿ ಪ್ರತಿಷ್ಠೆಯಾಗಿರುವುದು ವಿಶೇಷ. ಡಿಸೆಂಬರ್ 10 ರಂದು ಮತದಾನ ನಡೆಯಲಿದ್ದು, ಉಳಿದ 15 ದಿನಗಳಲ್ಲಿ ಮತದಾರ ಜನಪ್ರನಿಧಿಗಳನ್ನು ಸೆಳೆಯಲು ಮೂರು ಪಕ್ಷಗಳಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ.

ತಮ್ಮವರನ್ನು ಗೆಲ್ಲಿಸಲು ಮಾಜಿ ಸಿಎಂಗಳ ಪಣ :

ತಮ್ಮ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮಾಜಿ ಮುಖ್ಯಮಂತ್ರಿಗಳು ಪಣ ತೊಟ್ಟಿದ್ದು, ಪೈಪೋಟಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ.ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರು ತಮ್ಮ ಕಡೆಯ ಏಳು ಮಂದಿಗೆ ಟಿಕೆಟ್ ಕೊಡಿಸಿದ್ದು, ಅವರನ್ನು ಗೆಲ್ಲಿಸುವ ಹೊಣೆ ಅವರಮೇಲಿದೆ. ಇನ್ನು ಮಾಜಿ ಸಿಎಂ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ತಮ್ಮ ಎಂಟು ಬೆಂಬಲಿಗರಿಗೆ ಟಿಕೆಟ್ ಕೊಡಿದ್ದಾರೆ. ತಮ್ಮವರನ್ನು ಗೆಲ್ಲಿಸುವ ಅನಿವಾರ್ಯತೆ ಇದೆ. ಅದೇ ರೀತಿಯಲ್ಲಿ ಮಾಜಿ ಸಚಿವ ಜಗದೀಶ್ ಶೆಟ್ಟರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇದೇ ಆಶಯ ಹೊಂದಿದ್ದಾರೆ. ಇನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಪರಿಷತ್ ಜೆಡಿಎಸ್ ಸ್ಥಾನಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಈಗ ಸ್ಪರ್ಧಿಸಿರುವ ಏಳು ಸ್ಥಾನಗಳನ್ನು ಗೆಲ್ಲಲೇ ಬೇಕೆಂದು ಪಣ ತೊಟ್ಟು ಪ್ರಚಾರ ನಡೆಸುತ್ತಿದ್ದಾರೆ.

ಕಾಂಗ್ರೆಸ್‌ನಲ್ಲಿ ಕುಟುಂಬ ಮತ್ತು ಜಾತಿ ಆಧಾರಿತವಾಗಿ ಟಿಕೆಟ್ ಹಂಚಿಕೆಗೆ ಹೆಚ್ಚು ಒತ್ತು ನೀಡಿರುವಂತೆ ಬಿಜೆಪಿಯಲ್ಲೂ ಒಂದಷ್ಟು ಪ್ಲಾನ್ ಮಾಡಿರುವುದು ಕಂಡು ಬಂದಿದೆ. 8 ಮಂದಿ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡಿ, ಪ್ರಾಧಾನ್ಯತೆ ನೀಡಿದೆ. ಹಾಗೆಯೇ ನಾಲ್ವರು ಒಕ್ಕಲಿಗ, ಮೂವರು ಒಬಿಸಿ ವರ್ಗಕ್ಕೆ ಸೇರಿದವರಿಗೆ ಟಿಕೆಟ್ ನೀಡುವ ಮೂಲಕ ಜಾತಿ ಸಮೀಕರಣ ಮಾಡಲಾಗಿದೆ. ಜಿಲ್ಲಾವಾರು ಎಷ್ಟು ಮತ ಬಿಜೆಪಿ ಹೊಂದಿದೆ ಎಂಬ ಲೆಕ್ಕಾಚಾರವನ್ನು ಕಾಂಗ್ರೆಸ್ ಲೆಕ್ಕ ಹಾಕುತ್ತಿದೆ. ಗ್ರಾಮ ಪಂಚಾಯಿತಿಗಳಲ್ಲಿ ತಮ್ಮ ಪರವಾದವರೆಷ್ಟು, ಅವರನ್ನು ಹೇಗೆ ಹಿಡಿದಿಟ್ಟುಕೊಳ್ಳುವುದು ಎಂಬ ತಂತ್ರಗಾರಿಕೆ ಬಿಜೆಪಿ ಮಾಡುತ್ತಿದ್ದು, ಆ ಲೆಕ್ಕಾಚಾರದಲ್ಲೇ ಕಾಂಗ್ರೆಸ್ ಮು.ಂದೆ ಸಾಗುತ್ತಿದೆ. ಕಾಂಗ್ರೆಸ್ ಲೆಕ್ಕಾಚಾರದ ಪ್ರಕಾರ 12ರಿಂದ 14 ಸ್ಥಾನ ಗೆಲ್ಲಬಹುದು. ಅದಕ್ಕಿಂತ ಹೆಚ್ಚಿನ ಪ್ರಯತ್ನ ಇರಲಿದೆಯಾದರೂ ಕನಿಷ್ಠ 12 ಸ್ಥಾನವಂತೂ ಗೆದ್ದೇ ಗೆಲ್ಲಬಹುದೆಂಬ ವಿಶ್ವಾಸವನ್ನು ಕಾಂಗ್ರೆಸ್​ ಹೊಂದಿದೆ.

ಒಳ ಹೊಡೆತದ ಭೀತಿ :

ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಡಿ.ಕೆ.ಶಿವಕುಮಾರ್ ಇನ್ನಿಲ್ಲದ ಕಸರತ್ತು ನಡೆಸುತ್ತಿರುವುದು ಜೆಡಿಎಸ್ ಅನ್ನು ಕಂಗಾಲಾಗಿಸಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಪಕ್ಷದ ಒಳ ಹೊಡೆತದ ಭೀತಿಯೂ ಎದುರಾಗಿದೆ. ಪಕ್ಷದಿಂದ ಟಿಕೆಟ್ ಬಯಸಿದ್ದವರೇ ಸೋಲಿಸುವ ಆಟ ಆಡಿದರೆ ಕಷ್ಟವಾಗಬಹುದು.ಇನ್ನು ತುಮಕೂರಿನಲ್ಲಿ ದೇವೇಗೌಡರ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಜೆಡಿಎಸ್ ಹಾತೊರೆಯುತ್ತಿರುವುದು ಕಾಂಗ್ರೆಸ್‌ನಲ್ಲಿ ಆತಂಕ ಸೃಷ್ಟಿಸಿದೆ. ಚಿಕ್ಕಮಗಳೂರಿನಲ್ಲಿ ಅಹಿಂದ ಮತಗಳ ಒಟ್ಟುಗೂಡಿಸುವ ಕೈತಂತ್ರ ಬಿಜೆಪಿಯಲ್ಲಿ ಬೆವರು ಹರಿಸುವಂತೆ ಮಾಡುತ್ತಿದೆ. ಜೆಡಿಎಸ್ ಅಭ್ಯರ್ಥಿಗಳು ಇಲ್ಲದ ಕಡೆಗಳಲ್ಲಿ ಅವರ ಮತಗಳನ್ನು ಸೆಳೆಯಲು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಇದೆ.

Related Articles

Leave a Reply

Your email address will not be published. Required fields are marked *

Back to top button