ದಾವಣಗೆರೆ ಜಿಲ್ಲೆಯಲ್ಲಿ 700 ಕ್ಕೂ ಹೆಚ್ಚು ಎಕರೆ ಭತ್ತ, ಮೆಕ್ಕೆಜೋಳ ಬೆಳೆ ಮಳೆಯರಾಯನ ಹೊಡೆತಕ್ಕೆ ಸಿಲುಕಿ ಮಣ್ಣುಪಾಲಾಗಿದೆ.
ದಾವಣಗೆರೆ: ಬೆಣ್ಣೆನಗರಿಯಲ್ಲಿ ಮಳೆ ನಿಲ್ಲದಿರುವುದು ರೈತರ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಕಳೆದ ನಾಲ್ಕು ದಿನಗಳಿಂದ ಎಡೆಬಿಡದೇ ಮಳೆ ಸುರಿಯುತ್ತಿರುವ ಕಾರಣ ದಾವಣಗೆರೆ ಜಿಲ್ಲೆಯಲ್ಲಿ 700 ಕ್ಕೂ ಹೆಚ್ಚು ಎಕರೆ ಭತ್ತ ಸಂಪೂರ್ಣವಾಗಿ ನೆಲಕಚ್ಚಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯ ಹರಿಹರ ತಾಲೂಕಿನ ಆದಾಪುರ, ನಿಟ್ಟೂರು, ದೇವರಬೆಳಕೆರೆ, ನ್ಯಾಮತಿ, ಹೊನ್ನಾಳಿ, ಚನ್ನಗಿರಿ ಮಲೇಬೆನ್ನೂರು ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವುದು ರೈತರನ್ನು ಆತಂಕಕ್ಕೆ ದೂಡಿದೆ. ಸಾಲ ಮಾಡಿ ಬೆಳೆದಿದ್ದ ಭತ್ತ, ಮೆಕ್ಕೆಜೋಳ ಬೆಳೆ ಮಳೆಯರಾಯನ ಹೊಡೆತಕ್ಕೆ ಸಿಲುಕಿ ಮಣ್ಣುಪಾಲಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಆದಾಪುರ ಗ್ರಾಮದ ರೈತ ತಿಮ್ಮರಾಯ ತಮ್ಮ ಐದು ಎಕರೆ ಜಮೀನಿನಲ್ಲಿ ಎರಡೂವರೆ ಲಕ್ಷ ರೂ. ಖರ್ಚು ಮಾಡಿ ಭತ್ತ ಬೆಳೆದಿದ್ದರು. ಕಳೆದ ದಿನ ಸುರಿದ ಅಕಾಲಿಕ ಮಳೆಯಿಂದಾಗಿ ಸಂಪೂರ್ಣ ಬೆಳೆ ನೀರು ಪಾಲಾಗಿದ್ದು, ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಇಡೀ ಜಿಲ್ಲೆಯಲ್ಲಿ ಮೆಕ್ಕೆಜೋಳ ಹಾಗೂ ಭತ್ತ ಸೇರಿ ಒಟ್ಟು 700 ಎಕರೆ ಬೆಳೆ ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಇನ್ನು ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಗಿದ್ದರೂ ಯಾವೋಬ್ಬ ಜನಪ್ರತಿನಿಧಿ ರೈತರ ಜಮೀನುಗಳಿಗೆ ಭೇಟಿ ನೀಡಿ, ಪರಿಹಾರ ನೀಡುವ ಆಶ್ವಾಸನೆ ನೀಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ, ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.