ರಾಜ್ಯ

ರೈತರು ಹೊಸ ತಂತ್ರಜ್ಞಾನಗಳ ಬಳಕೆ ಕಲಿಯಬೇಕು: ರಾಜ್ಯಪಾಲ

ಬೆಂಗಳೂರು(ನ.15): ಕೃಷಿಯಲ್ಲಿ ನ್ಯಾನೊ ತಂತ್ರಜ್ಞಾನ (Nano Technology) , ಡ್ರೋನ್‌ ಬಳಕೆ, ರೈತ ಸ್ನೇಹಿ ಅಪ್ಲಿಕೇಶನ್‌ಗಳ ಅಭಿವೃದ್ಧಿ, ಹೊಸ ಸ್ಟಾರ್ಟ್‌ಅಪ್‌ಗೆ (Start up) ಉತ್ತೇಜನ ಸಿಗಬೇಕು. ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖವಾದರೆ ಹೆಚ್ಚು ಇಳುವರಿ ಪಡೆಯಲು ಸಾಧ್ಯ ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ (Thawar Chand Gehlot) ಅವರು ಅಭಿಪ್ರಾಯಪಟ್ಟರು. ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (GKVK) ಭಾನುವಾರ ಏರ್ಪಡಿಸಿದ್ದ ಕೃಷಿ ಮೇಳದ ಸಮಾರೋಪ ಮತ್ತು ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ನಮ್ಮದು ಕೃಷಿ (Agriculture) ಆಧಾರಿತ ರಾಷ್ಟ್ರವಾಗಿದ್ದು ಕೃಷಿಗೆ ಸಾಕಷ್ಟುಪ್ರೋತ್ಸಾಹ ನೀಡಬೇಕು. ಡ್ರೋನ್‌ಗಳನ್ನು ಬಳಸಿಕೊಳ್ಳಬೇಕು. ಸ್ಟಾರ್ಟ್‌ಅಪ್‌ಗಳಿಗೂ ಉತ್ತೇಜನ ನೀಡಬೇಕು. ಸಮಗ್ರ ಕೃಷಿ ಪದ್ಧತಿಯಿಂದ ಹೆಚ್ಚು ಫಸಲು ಪಡೆದು ಆದಾಯ ಹೆಚ್ಚಿಸಿಕೊಳ್ಳಬೇಕು. ಇಂತಹ ಕೃಷಿ ಮೇಳ ಆಯೋಜನೆಯಿಂದ ಸಾವಿರಾರು ರೈತರು ಮತ್ತು ನಾಗರಿಕರಿಗೆ ಪ್ರಯೋಜನವಾಗುತ್ತದೆ. ಮೇಳ ಆಯೋಜಿಸಿರುವ ಕೃಷಿ ವಿವಿ ಉತ್ತಮ ಕೆಲಸ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಲಾ ಒಂದು ಗ್ರಾಮ ದತ್ತು ತೆಗೆದುಕೊಂಡ ಕೃಷಿ ವಿಜ್ಞಾನ ಕೇಂದ್ರ!

ಕೃಷಿ ವಿವಿಯು 57 ವರ್ಷದಲ್ಲಿ 200ಕ್ಕೂ ಹೆಚ್ಚು ಹೊಸ ತಳಿ, 334 ಕೃಷಿ ತಂತ್ರಜ್ಞಾನಗಳನ್ನು ಬಿಡುಗಡೆ ಮಾಡಿದೆ. ವಿವಿಯು ಅಭಿವೃದ್ಧಿ ಪಡಿಸಿದ ವಿಸ್ತರಣಾ ಮಾದರಿಯನ್ನು ದೇಶಾದ್ಯಂತ ಅಳವಡಿಸಲಾಗಿದೆ. ಪ್ರತಿ ಕೃಷಿ ವಿಜ್ಞಾನ ಕೇಂದ್ರವು ತಲಾ ಒಂದು ಗ್ರಾಮ (Village) ದತ್ತು ತೆಗೆದುಕೊಂಡು ಜಿಲ್ಲಾ ಮಟ್ಟದಲ್ಲಿ ಮಾದರಿ ಗ್ರಾಮವನ್ನಾಗಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.

7 ಕೃಷಿ ಸಾಧಕರಿಗೆ ರಾಜ್ಯಮಟ್ಟದ ಕೃಷಿ ಪ್ರಶಸ್ತಿಗಳನ್ನು ರಾಜ್ಯಪಾಲರು (Governor) ಪ್ರದಾನ ಮಾಡಿದರು. ಇದಕ್ಕೂ ಮುನ್ನ ರಾಜ್ಯಪಾಲರು ಕೃಷಿ ವಿವಿ ಅಭಿವೃದ್ಧಿಪಡಿಸಿರುವ 10 ಹೊಸ ತಳಿಗಳ ಪ್ರಾತ್ಯಕ್ಷಿಕೆ ತಾಕುಗಳನ್ನು ವೀಕ್ಷಿಸಿದರು. ಸಮಾರಂಭದಲ್ಲಿ ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ರಾಜೇಂದ್ರ ಪ್ರಸಾದ್‌, ಕುಲಸಚಿವರಾದ ಡಾ.ಬಸವೇಗೌಡ, ವಿಸ್ತರಣಾ ನಿರ್ದೇಶಕ ಡಾ.ಎನ್‌.ದೇವಕುಮಾರ್‌, ಸಂಶೋಧನಾ ನಿರ್ದೇಶಕ ಡಾ.ಷಡಕ್ಷರಿ, ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ರಾಮಾಂಜಿನಿ ಗೌಡ, ಅರವಿಂದ್‌, ಶ್ರೀರಾಮ… ಮತ್ತಿತರರು ಉಪಸ್ಥಿತರಿದ್ದರು.

7 ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ

7 ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಿ ರಾಜ್ಯಪಾಲರು ಗೌರವಿಸಿದರು. ಮಾಜಿ ಪ್ರಧಾನಿ ದೇವೇಗೌಡ ಪ್ರಶಸ್ತಿಯನ್ನು ಹಾಸನದ ಅರಕಲಗೂಡಿನ ದೊಡ್ಡಮಗ್ಗೆಯ ಎಂ.ಸಿ.ರಂಗಸ್ವಾಮಿ, ಡಾ.ಎಂ.ಎಚ್‌.ಮರಿಗೌಡ ಪ್ರಶಸ್ತಿಯನ್ನು ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ತುಮಕೂರಿನ ಟಿ.ಎಂ.ಅರವಿಂದ, ಬಾಗಲಕೋಟೆ ತೋಟಗಾರಿಕಾ ವಿವಿಯ ಸಂಶೋಧನಾ ನಿರ್ದೇಶಕ ಡಾ.ಎಚ್‌.ಪಿ.ಮಹೇಶ್ವರಪ್ಪ, ಕ್ಯಾನ್‌ ಬ್ಯಾಂಕ್‌ ಪ್ರಶಸ್ತಿಯನ್ನು ಹಾಸನದ ಆಲೂರು ತಾಲೂಕಿನ ವೈ.ಜಿ.ಮಂಜುಳಾ, ದೊಡ್ಡಬಳ್ಳಾಪುರ ತಾಲೂಕಿನ ಲಕ್ಷ್ಮೇದೇವಿಪುರದ ಸಿ.ನ. ವಿಕ್ರಮ್‌, ಡಾ.ಆರ್‌.ದ್ವಾರಕಿನಾಥ್‌ ಪ್ರಶಸ್ತಿಯನ್ನು ಕೋಲಾರದ ಅರಿಗಾನಹಳ್ಳಿಯ ಮುನಿರೆಡ್ಡಿ, ದೊಡ್ಡಬಳ್ಳಾಪುರದ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಡಾ.ಎ.ಪಿ.ಮಲ್ಲಿಕಾರ್ಜುನ ಗೌಡ ಅವರಿಗೆ ನೀಡಿ ಸನ್ಮಾನಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button