ಕೊಹ್ಲಿ ODI ನಾಯಕತ್ವವನ್ನು ತ್ಯಜಿಸಬಹುದು: ರವಿಶಾಸ್ತ್ರಿ
ಟಿ20 ತಂಡದ ನಾಯಕತ್ವ ತ್ಯಜಿಸಿ ತನ್ನ ಮೇಲಿನ ಸ್ವಲ್ಪ ಬಾರವನ್ನು ಕಡಿಮೆ ಮಾಡಿಕೊಂಡಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕಡೆಗೆ ಹೆಚ್ಚು ಗಮನ ನೀಡುವಿದಕ್ಕಾಗಿ ಉಳಿದ ಸ್ವರೂಪದ ನಾಯಕತ್ವವನ್ನು ತ್ಯಜಿಸಬಹುದು ಎಂದು ಟೀಮ್ ಇಂಡಿಯಾ ಮಾಜಿ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಭಾರತ ತಂಡದ ಮುಖ್ಯ ಕೋಚ್ ಅಗಿದ್ದ ರವಿಶಾಸ್ತ್ರಿ ಅವರ ಅವಧಿ ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆ ಅಂತ್ಯವಾಗಿದ್ದು, ಕನ್ನಡಿಗ ರಾಹುಲ್ ದ್ರಾವಿಡ್ ಭಾರತ ತಂಡ ಮುಖ್ಯ ಕೋಚ್ ಸ್ಥಾನಕ್ಕೇರಿದ್ದಾರೆ.
ದುಬೈನಿಂದ ಆಗಮಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿರುವ ಶಾಸ್ತ್ರಿ, ಕಳೆದ ನಾಲ್ಕೈದು ವರ್ಷಗಳಿಂದ ಭಾರತ ತಂಡವನ್ನು ಅದ್ಭುತವಾಗಿ ಮುನ್ನಡೆಸಿರುವ ಕೊಹ್ಲಿ ಬ್ಯಾಟಿಂಗ್ ಕಡೆಗೆ ಗಮನ ಮತ್ತು ಒತ್ತಡವನ್ನು ನಿವಾರಿಸಿಕೊಳ್ಳುವುದಕ್ಕಾಗಿ 50 ಓವರ್ಗಳ ನಾಯಕತ್ವವನ್ನು ತ್ಯಜಿಸುವ ಸಾಧ್ಯತೆಯಿದೆ ಎಂದಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡ ಕೊಹ್ಲಿ ನಾಯಕತ್ವದಲ್ಲಿ ಕಳೆದ 5 ವರ್ಷಗಳಿಂದ ಅಗ್ರಸ್ಥಾನದಲ್ಲಿದೆ. ಆದಾಗ್ಯೂ, ಭವಿಷ್ಯದಲ್ಲಿ ಬ್ಯಾಟಿಂಗ್‌ನತ್ತ ಗಮನ ಹರಿಸಲು ಅವರು ನಾಯಕತ್ವವನ್ನು ತ್ಯಜಿಸಬಹುದು. ಇದು ತಕ್ಷಣವೇ ಆಗುವುದಿಲ್ಲ, ಆದರೆ ಮಾನಸಿಕವಾಗಿ ದಣಿದಿರುವ ಅವರು ಖಂಡಿತ ನಾಯಕತ್ವವನ್ನು ತ್ಯಜಿಸಬಹುದು. ವೈಟ್ಬಾಲ್ ಕ್ರಿಕೆಟ್‌ನಲ್ಲೂ ಅದೇ ಸಂಭವಿಸಬಹುದು. ಪ್ರಸ್ತುತ ಅವರು ಕೇವಲ ಟೆಸ್ಟ್ ನಾಯಕತ್ವದ ಮೇಲೆ ಕೇಂದ್ರೀಕರಿಸಲು ಬಯಸುತ್ತಾರೆ ಎಂದು ಅವರು ಶಾಸ್ತ್ರಿ ಹೇಳಿದ್ದಾರೆ.
ಈ ರೀತಿ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಅವರೇ ಮೊದಲಿಗರಲ್ಲ. ಈ ಹಿಂದೆ ಸಾಕಷ್ಟು ಯಶಸ್ಸು ಗಳಿಸಿದ್ದ ಕ್ರಿಕೆಟಿಗರು ತಮ್ಮ ಬ್ಯಾಟಿಂಗ್ ಕಡೆಗೆ ಗಮನ ನೀಡುವುದಕ್ಕಾಗಿ ನಾಯಕತ್ವವನ್ನು ಬಿಟ್ಟುಕೊಟ್ಟಿದ್ದಾರೆ ಎಂದು ಅವರು ಕೊಹ್ಲಿ ಮನದಲ್ಲಿರುವ ಆಲೋಚನೆಯನ್ನು ಬಹಿರಂಗಪಡಿಸಿದ್ದಾರೆ.