ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar) ಅಗಲಿ ಇಂದಿಗೆ 11ನೇ ದಿನ. ಈ ಹಿನ್ನೆಲೆ ಕಂಠೀರವ ಸ್ಟುಡಿಯೋಗೆ (Kantheerava Studio) ಆಗಮಿಸಿದ ದೊಡ್ಮನೆ ಕುಟುಂಬ ಅಪ್ಪು (Appu) ಸಮಾಧಿಗೆ ಪೂಜೆ ಸಲ್ಲಿಸಿದರು. ಸಮಾಧಿ ಸ್ಥಳಕ್ಕೆ ಆಗಮಿಸಿದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಅಪ್ಪು ಪತ್ನಿ ಅಶ್ವಿನಿ ಮತ್ತು ಮಕ್ಕಳು ಆಗಮಿಸಿ ನಮನ ಸಲ್ಲಿಸಿದರು. 11ನೇ ದಿನ ಕಾರ್ಯ ಹಿನ್ನೆಲೆ ಅಪ್ಪು ಅವರಿಗೆ ಇಷ್ಚವಾದ ಆಹಾರವನ್ನು ಪೂಜೆಗೆ ಇರಿಸಲಾಗಿತ್ತು. ಇದೇ ವೇಳೆ ಮಾತನಾಡಿದ ಶಿವರಾಜ್ ಕುಮಾರ್ (Shivarajkumar), ಇವತ್ತು ಬೆಳಗ್ಗೆ ಅಪ್ಪುಗೆ ಈ ಎಲ್ಲ ಕಾರ್ಯ ಮಾಡಬೇಕಾ ಅಂತ ಬಂದಾಗ ತುಂಬಾ ನೋವಾಯ್ತು. ಅಭಿಮಾನಿಗಳಲ್ಲಿಯೇ ಆತನನ್ನು ಕಾಣುತ್ತಿದ್ದೇವೆ,ಯಾರು ಸಹ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿಕೊಂಡರು.
ಚಿಕ್ಕ ವಯಸ್ಸಿನಿಂದಲೂ ಅಪ್ಪು ಬೆಳವಣಿಗೆಯನ್ನು ನೋಡಿಕೊಂಡು ಬಂದಿದ್ದೇನೆ. ಇನ್ನು ಅಭಿಮಾನಿಗಳು ಅಪ್ಪುನನ್ನು ಆರಾಧಿಸುತ್ತಿದ್ದರು. ಅವರ ನೋವು ಏನು ಎಂಬವುದು ಎಂದು ನಮಗೆ ಅರ್ಥವಾಗುತ್ತದೆ. ಶೀಘ್ರದಲ್ಲೇ ಪೊಲೀಸರು ಅಭಿಮಾನಿಗಳಿಗೆ ಕಂಠೀರವ ಸ್ಟುಡಿಯೋಳಗೆ ಪ್ರವೇಶಿಸಲು ಅನುಮತಿ ನೀಡಲಿದ್ದಾರೆ. ನಾಳೆ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ತಿಥಿ ಕಾರ್ಯದ ಅಂಗವಾಗಿ ಅನ್ನ ಸಂತರ್ಪಣೆ , ಮನೆಯಲ್ಲಿಯೂ ಪೂಜೆ ಸಲ್ಲಿಸಲಾಗುತ್ತದೆ ಎಂದರು.
ಇದೇ ವೇಳೆ ಪುನೀತ್ ಅವರಿಗೆ ಪದ್ಮಶ್ರೀ ನೀಡಬೇಕೆಂಬ ಅಭಿಮಾನಿಗಳ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಶಿವಣ್ಣ, ಅಪ್ಪು ಎಲ್ಲರ ಹೃದಯದಲ್ಲಿ ಶ್ರೀ ಆಗಿರುತ್ತಾನೆ. ಅವನು ಅಮರಶ್ರೀ ಎಂದು ಹೇಳಿದರು. ಕಂಠೀರವ ಸ್ಟುಡಿಯೋ ಬಳಿ ಅಭಿಮಾನಿಗಳಿಗೆ ಪುಲಾವ್ ಮತ್ತು ಕೇಸರಿಬಾತ್ ವಿತರಿಸಲಾಯ್ತು. 11ನೇ ಕಾರ್ಯ ಹಿನ್ನೆಲೆ ದೊಡ್ಮನೆ ಕುಟುಂಬಸ್ಥರು, ನಟ ಮುರಳಿ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿಂತೆ ಅತ್ಯಾಪ್ತರು ಉಪಸ್ಥಿತರಿದ್ದರು.