ದಕ್ಷಿಣಕನ್ನಡ: ತನ್ನ ಧರ್ಮದಲ್ಲಿ ತಾರತಮ್ಯವಾಗುತ್ತಿದೆ ಎಂದು ಧರ್ಮ ಪರಿವರ್ತಿತರಾದ (Religion Conversion) ಕುಟುಂಬಗಳು (Families) ಇದೀಗ ಧರ್ಮ ಸಂಕಟದಲ್ಲಿ ಸಿಲುಕಿಕೊಂಡಿದೆ. ಧರ್ಮ ಬದಲಾಯಿಸಿದ ಕಾರಣ ಸಿಗುವ ಸವಲತ್ತುಗಳೂ (Facilities) ಸಿಗದೆ ಪರಿತಪಿಸುವಂತಾಗಿದೆ. ಹೊಸ ಧರ್ಮದಿಂದಲೂ ಸವಲತ್ತಿಲ್ಲ, ಹಳೆ ಧರ್ಮದಲ್ಲಿ ಸಿಗುತ್ತಿದ್ದ ಸವಲತ್ತೂ ಇಲ್ಲದಂತಾಗಿದ್ದು, ಈ ಕುಟುಂಬಗಳ ಸಮಸ್ಯೆಗೆ (Families Facing Problems) ಪರಿಹಾರ ಕಲ್ಪಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಇದು ಸುಳ್ಯ ತಾಲೂಕಿನ ಪಂಚ ಗ್ರಾಮಪಂಚಾಯತ್ ನ ಪಲ್ಲೋಡಿ ಎನ್ನುವ ಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬಗಳ ಕಥೆಯಾಗಿದೆ.
ಶೋಷಣೆಗೆ ನಲುಗಿ ಮತಾಂತರಗೊಂಡಿದ್ದರು
1965 ರ ಸುಮಾರಿಗೆ ಕೇರಳ ರಾಜ್ಯದ ಮಂಜೇಶ್ವರ ಭಾಗದಿಂದ ಬಂದಿರುವ ಪರಿಶಿಷ್ಟ ಪಂಗಡದಲ್ಲಿ ಬರುವ ಕೊರಗ ಸಮುದಾಯದ ಈ ಕುಟುಂಬಗಳು ಪಂಜ ಗ್ರಾಮಪಂಚಾಯತ್ ನ ಪಲ್ಲೋಡಿ ಎನ್ನುವ ಪ್ರದೇಶದಲ್ಲಿ ಬೀಡು ಬಿಟ್ಟಿದ್ದರು. ಆ ಕಾಲದಲ್ಲಿ ಜಾತಿ ವ್ಯವಸ್ಥೆಯು ಅತ್ಯಂತ ಕಠೋರ ರೀತಿಯಲ್ಲಿ ಆಚರಿಸುತ್ತಿದ್ದ ಸಂದರ್ಭದಲ್ಲಿ ಕೊರಗ ಸಮುದಾಯದ ಈ ಕುಟುಂಬಗಳ ಮೇಲೆ ಮೇಲ್ವರ್ಗದವರಿಂದ ಶೋಷಣೆಗಳು ನಡೆಯುತ್ತಿತ್ತು. ಈ ಕುಟುಂಬಗಳ ಮೇಲಾಗುತ್ತಿದ್ದ ಶೋಷಣೆಯನ್ನು ಹೋಗಲಾಡಿಸುವ ಹಿನ್ನೆಲೆಯಲ್ಲಿ ಅಂದಿನ ಪಂಜ ಚರ್ಚ್ ನ ಧರ್ಮಗುರುಗಳು ಇಲ್ಲಿನ ಹತ್ತಾರು ಕೊರಗ ಕುಟುಂಬಗಳನ್ನು ಧರ್ಮಪರಿವರ್ತನೆ ಮಾಡಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿದ್ದರು. ಅಲ್ಲದೆ ಪರ್ಲೋಡಿಯಲ್ಲಿ ಚರ್ಚ್ ವತಿಯಿಂದಲೇ ಪುಟ್ಟ ಮನೆಗಳನ್ನು ನಿರ್ಮಿಸಿ, ಮನೆಯೊಳಗೆ ಕ್ರೈಸ್ತ ಧರ್ಮಕ್ಕೆ ಸಂಬಂಧಪಟ್ಟ ವಸ್ತುಗಳನ್ನು ನೀಡಿದ್ದರು.
ಕುಟುಂಬಗಳ ದಾಖಲೆ ಪತ್ರಗಳಲ್ಲಿ ಗೊಂದಲ
ಆ ಸಂದರ್ಭದಲ್ಲಿ ಸ್ಥಳೀಯ ಮಂಡಲ ಪಂಚಾಯತ್ ನಿಂದ ಸರ್ಕಾರದ ಸೌಲಭ್ಯಗಳನ್ನೂ ಈ ಕುಟುಂಬಕ್ಕೆ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ ಇದೀಗ ಈ ಕುಟುಂಬಗಳ ದಾಖಲೆ ಪತ್ರಗಳಲ್ಲಿ ಗೊಂದಲವಿರುವ ಕಾರಣಕ್ಕಾಗಿ ಸರಕಾರಿ ಸೌಲಭ್ಯಗಳನ್ನು ನೀಡಲು ಸ್ಥಳೀಯ ಗ್ರಾಮಪಂಚಾಯತ್ ಹಿಂದೇಟು ಹಾಕುತ್ತಿದೆ. ಈ ಕುಟುಂಬ ಸದಸ್ಯರ ಆಧಾರ್ ಕಾರ್ಡುಗಳಲ್ಲಿ ಕೆಲವರ ಹೆಸರು ಕ್ರಿಶ್ಚಿಯನ್ ಹೆಸರಾಗಿದ್ದರೆ, ಇನ್ನು ಕೆಲವರ ಹೆಸರು ಹಿಂದೂ ಹೆಸರುಗಳಾಗಿವೆ. ಪರಿಶಿಷ್ಟ ಪಂಗಡಗಳಿಗೆ ಸರಕಾರದಿಂದ ನೀಡುವ ಸೌಲಭ್ಯಗಳು ಧರ್ಮಪರಿವರ್ತನೆಯ ಕಾರಣದಿಂದ ಈ ಕುಟುಂಬಗಳಿಗೆ ಸಿಗದಂತಾಗಿದೆ.