ಒಬ್ಬೊಬ್ಬರಿಗೆ ಒಂದೊಂದು ರೀತಿಯ ವಿಚಿತ್ರ ಅಭ್ಯಾಸಗಳಿರುತ್ತದೆ. ಇದನ್ನು ವ್ಯಸನ ಎನ್ನಬಹುದು. ಧೂಮಪಾನ, ಮದ್ಯಪಾನ ಸಾಮಾನ್ಯ ವ್ಯಸನವಾದರೆ ಇತ್ತೀಚೆಗೆ ಕೇಳಿಬರುತ್ತಿರುವ ಪ್ರಮುಖವಾದ ವ್ಯಸನ ಡ್ರಗ್ಸ್ (Drugs) ಸೇವನೆ. ಆದರೆ, ವ್ಯಸನವೆಂದರೆ ಇದಿಷ್ಟೇ ಅಲ್ಲ, ಗಮ್ ವಾಸನೆ ಕುಡಿಯುವುದು, ತಿನ್ನುವುದು, ಚಾಕ್ಪೀಸ್ ತಿನ್ನುವುದು, ನೈಲ್ ಪಾಲಿಷ್ ವಾಸನೆ ಕುಡಿಯುವುದು, ಇಂಕ್ ಕುಡಿಯುವುದು, ಮಣ್ಣು ತಿನ್ನುವುದು – ಹೀಗೆ ನಾನಾ ರೀತಿಯ ವ್ಯಸನ ಅಥವಾ ವಿಚಿತ್ರ ಅಭ್ಯಾಸವಿರುತ್ತದೆ. ಅದರಲ್ಲೂ, ಮಕ್ಕಳಾಗಿದ್ದಾಗ ಇಂತಹ ವಿಚಿತ್ರ ಅಭ್ಯಾಸಗಳು ಹಲವರಲ್ಲಿರುತ್ತದೆ. ಇಷ್ಟೆಲ್ಲ ಪೀಠಿಕೆ ಯಾಕೆ ಅಂದರೆ, ನಾವು ಹೇಳಲು ಹೊರಟಿರುವ ಈ ಮಹಿಳೆಯ ಕತೆ ಕೇಳಿ. ಈಕೆ ಇವೆಲ್ಲ ಅಭ್ಯಾಸಗಳಿಗಿಂತ ವಿಭಿನ್ನ, ವಿಚಿತ್ರ.
ಅಮೆರಿಕದ ಮಿಚಿಗನ್ ರಾಜ್ಯದ ನಿಕೋಲ್ ಎಂಬ ಮಹಿಳೆ ತನ್ನ ಮನೆಯ ಗೋಡೆಗಳಿಂದ ಸುಣ್ಣವನ್ನು ಕೆರೆದು ದಿನಕ್ಕೆ 6 ಬಾರಿ ಸೇವಿಸುವುದಾಗಿ TLC ಟಾಕ್ ಶೋ, “ಮೈ ಸ್ಟ್ರೇಂಜ್ ಅಡಿಕ್ಷನ್”ನಲ್ಲಿ ಬಹಿರಂಗಪಡಿಸಿದ್ದಾಳೆ.
ಒಣಗಿದ ಗೋಡೆಗಳ ವಾಸನೆ ಇಷ್ಟಪಡುತ್ತೇನೆ ಎಂದು ನಿಕೋಲ್ TLCಯ ಈ ಟಾಕ್ ಶೋನಲ್ಲಿ ಹೇಳಿದರು. ಅದರ ವಿನ್ಯಾಸ ಮತ್ತು ರುಚಿಯನ್ನು ತುಂಬಾ ಇಷ್ಟಪಡುತ್ತೇನೆ, ಇಡೀ ವಾರದಲ್ಲಿ 3.2 ಚದರ ಅಡಿ ಗೋಡೆಯನ್ನು ತಿನ್ನುತ್ತೇನೆ. ಕಡುಬಯಕೆ ಬಂದಾಗಲೆಲ್ಲಾ ಗೋಡೆಯಿಂದ ತುಂಡು ಮಾಡುವುದನ್ನು ಪ್ರಾರಂಭಿಸುತ್ತೇನೆ, ಗೋಡೆ ಕೆರೆದು ಸುಣ್ಣ ತಿನ್ನುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಇನ್ನು, ಆಕೆ ತನ್ನ ಮನೆಯಲ್ಲಿರುವ ಗೋಡೆಯ ಸುಣ್ಣ ಮಾತ್ರ ಅಲ್ಲ, ತನ್ನ ಸ್ನೇಹಿತರ ಮತ್ತು ಸಂಬಂಧಿಕರ ಮನೆಗಳ ಗೋಡೆಯಿಂದಲೂ ಸುಣ್ಣವನ್ನು ತಿಂದಿದ್ದೇನೆ ಎಂದೂ ಹೇಳಿದ್ದಾರೆ.