ದುಬೈ, ಅ. 20: ಭಾರತ ಟಿ20 ತಂಡ ಈ ಬಾರಿಯ ವಿಶ್ವಕಪ್ನಲ್ಲಿ ಚಾಂಪಿಯನ್ ಆಗಲು ಫೇವರಿಟ್ ತಂಡವಲ್ಲ. ಏಕದಿನ ವಿಶ್ವಕಪ್ನ ಹಾಲಿ ಚಾಂಪಿಯನ್ ಆಗಿರುವ ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ ಗೆಲ್ಲುವ ಅವಕಾಶ ಹೆಚ್ಚು ಹೊಂದಿದೆ ಎಂದು ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಮೈಕೇಲ್ ವಾನ್ (Former England Cricket Player Michael Vaughan) ಅಭಿಪ್ರಾಯಪಟ್ಟಿದ್ದಾರೆ.
ಮೊನ್ನೆ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸುಲಭವಾಗಿ ಜಯಭೇರಿ ಭಾರಿಸಿದ ಬೆನ್ನಲ್ಲೇ ವಾನ್ ಈ ಮಾತು ಹೇಳಿದ್ದಾರೆ. ಭಾರತ ತಂಡ ಈ ವಿಶ್ವಕಪ್ ಗೆಲ್ಲುತ್ತೆ ಎಂಬ ಮಾತುಗಳು ಯಾಕೆ ಬರುತ್ತಿದೆಯೋ ಎಂದು ಬಿಬಿಸಿ ಕಾರ್ಯಕ್ರಮವೊಂದರಲ್ಲಿ ಅಚ್ಚರಿ ವ್ಯಕ್ತಪಡಿಸಿದ ಅವರು, ಟೀಮ್ ಇಂಡಿಯಾ ತನ್ನ ಹಿಂದಿನ ಕೆಲ ಟೂರ್ನಿಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ಸಮರ್ಥಿಸಿಕೊಂಡಿದ್ದಾರೆ.
“ನನ್ನ ಪ್ರಕಾರ ಈ ವಿಶ್ವಕಪ್ ಗೆಲ್ಲಲು ಇಂಗ್ಲೆಂಡ್ ಫೇವರಿಟ್ ಆಗಿದೆ. ಟಿ20 ಕ್ರಿಕೆಟ್ನಲ್ಲಿ ಭಾರತಕ್ಕೆ ಹೇಗೆ ಫೇವರಿಟ್ ಹಣೆಪಟ್ಟಿ ಸಿಗುತ್ತದೋ ನಂಗಂತೂ ಗೊತ್ತಿಲ್ಲ. ಕಳೆದ ಕೆಲ ಟೂರ್ನಿಗಳಲ್ಲಿ ಭಾರತದವರು ಹೆಚ್ಚು ಯಶಸ್ಸು ಕಂಡಿಲ್ಲ” ಎಂದು ವಾನ್ ವಿಶ್ಲೆಷಿಸಿದ್ದಾರೆ.
ಮೈಕೇಲ್ ವಾನ್ ಪ್ರಕಾರ, ಇಂಗ್ಲೆಂಡ್ ತಂಡಕ್ಕೆ ಈ ವಿಶ್ವಕಪ್ ಗೆಲ್ಲಲು ಪ್ರಬಲ ಸಾಧ್ಯತೆ ಇದೆ. ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ತಂಡಗಳಿಂದ ಇಂಗ್ಲೆಂಡ್ ತಂಡಕ್ಕೆ ತೀವ್ರ ಪೈಪೋಟಿ ಎದುರಾಗಬಹುದು. ಭಾರತ ಮತ್ತು ಪಾಕಿಸ್ತಾನಗಳೂ ಪ್ರಬಲ ಸವಾಲೊಡ್ಡಬಲ್ಲವಂತೆ.