ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ ಮುಖಾಮುಖಿಯಾಗಿದ್ದವು. ಕಳೆದ ಎರಡು ಪಂದ್ಯದಲ್ಲಿ ಸಿಎಸ್ಕೆ ತಂಡದಿಂದ ಹೊರಗುಳಿದಿದ್ದ ಸ್ಟಾರ್ ಬ್ಯಾಟ್ಸ್ಮನ್ ಸುರೇಶ್ ರೈನಾ ಈ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದೇ ಎಲ್ಲರೂ ಊಹಿಸಿದ್ದರು. ರೈನಾ ಮತ್ತುಎಂಎಸ್ ಧೋನಿ ಅಭಿಮಾನಿಗಳೂ ಸಹ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರೈನಾ ತಂಡದಲ್ಲಿರುವುದನ್ನು ಬಯಸಿದ್ದರು. ಆದರೆ, ಟಾಸ್ ನಂತರ ಎಲ್ಲರಿಗೂ ನಿರಾಸೆ ಕಾದಿತ್ತು.
ಏಕೆಂದರೆ ರೈನಾ ಬದಲಿಗೆ ಮತ್ತೆ ಕನ್ನಡಿಗ ರಾಬಿನ್ ಉತ್ತಪ್ಪ ಅವರಿಗೆ ಚಾನ್ಸ್ ನೀಡಲಾಗಿತ್ತು. ಈ ಪಂದ್ಯದಲ್ಲಿ ಉತ್ತಪ್ಪ ಅದ್ಭುತ ಪ್ರದರ್ಶನ ನೀಡಿ ಪಂದ್ಯದ ಗೆಲುವಿಗೆ ಕಾರಣರಾಗಿದ್ದರೂ ಸಹ ರೈನಾ ಅವರನ್ನು ತಂಡದಿಂದ ಹೊರಗಿಟ್ಟಿದ್ದಕ್ಕೆ ಸಿಎಸ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸಿಎಸ್ಕೆ ಐಪಿಎಲ್ನಲ್ಲಿ ಈವರೆಗೆ ಮೂರು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಮೂರು ಬಾರಿಯೂ ಸುರೇಶ್ ರೈನಾ ಅವರ ಪಾತ್ರ ಮಹತ್ವದ್ದಾಗಿತ್ತು. ಆದರೆ, ಕಳೆದ 13 ವರ್ಷದ ಇತಿಹಾಸದಲ್ಲಿ ಮಹತ್ವದ ಪಂದ್ಯವೊಂದರಲ್ಲಿ ಸುರೇಶ್ ರೈನಾ ಅವರಿಗೆ ಆಡುವ 11ರ ಬಳಗದಲ್ಲಿ ಸ್ಥಾನ ನೀಡದಿರುವುದು ಇದೇ ಮೊದಲು. ಇದೇ ಕಾರಣಕ್ಕೆ ಸಿಎಸ್ಕೆ ಅಭಿಮಾನಿಗಳು ಟ್ವಿಟರ್ನಲ್ಲಿ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.