ಮೃತ ಕುಟುಂಬಕ್ಕೆ 3 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ: ಮಕರಬ್ಬಿ ಕಲುಷಿತ ನೀರು ಸೇವನೆ ಪ್ರಕರಣ..!
ಬೆಂಗಳೂರು (ಅ. 5): ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಮಕರಬ್ಬಿ ಗ್ರಾಮದಲ್ಲಿ (Makkarabbi Village polluted drinking water) ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಪರಿಹಾರ ಘೋಷಣೆ ಮಾಡಿದ್ದಾರೆ. ಈ ಕುರಿತು ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ಪ್ರಕರಣ ದುಃಖದ ಸಂಗತಿಯಾಗಿದೆ.
ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಘಟನೆಯಲ್ಲಿ ಸಾವನ್ನಪ್ಪಿದ ಪ್ರತಿ ಕುಟುಂಬಕ್ಕೆ 3 ಲಕ್ಷ ರೂ ಪರಿಹಾರ ಘೋಷಣೆ ಮಾಡಲಾಗಿದೆ. ಪ್ರಕರಣ ಕುರಿತು ಸಮಗ್ರ ತನಿಖೆ ನಡೆಸಿ, ವರದಿ ನೀಡಲು ಸೂಚನೆ ನೀಡಲಾಗಿದೆ. ಇದೇ ವೇಳೆ ಅಜಲ್ಪುರದ ಘಟನೆ ಬಗ್ಗೆಯೂ ಮಾಹಿತಿ ಕೇಳಲಾಗಿದೆ ಎಂದರು.
ಘಟನೆ ಸ್ಥಳಕ್ಕೆ ಜಿಲ್ಲಾ ಎಸ್ಪಿ ಭೇಟಿ
ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ ಇಂದು 6ಕ್ಕೆ ಏರಿದೆ. ಕಳೆದೊಂದು ವಾರದಿಂದ ಘಟನೆಯಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನಲೆ ಇಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಮಕರಬ್ಬಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಇವರ ಜೊತೆಗೆ ಹೊಸಪೇಟೆ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ಹಡಗಲಿ ತಹಸೀಲ್ದಾರ್ ಮಹೇಂದ್ರ, ತಾಲೂಕುಪಂಚಾಯತಿ ಇಒ ಪ್ರಭಾಕರ ರೆಡ್ಡಿ, ಆರೋಗ್ಯಾಧಿಕಾರಿ ವಿನೋದ್, ನೈರ್ಮಲ್ಯ ಇಲಾಖೆ ಎಡಬ್ಲ್ಯೂಇ ಕೂಡ ಭೇಟಿ ನೀಡಿದ್ದಾರೆ.