ಬಾಂಗ್ಲಾದೇಶ ಶಿಬಿರದಲ್ಲಿ ರೋಹಿಂಗ್ಯಾ ನಿರಾಶ್ರಿತರ ನಾಯಕನ ಗುಂಡಿಕ್ಕಿ ಹತ್ಯೆ
ಢಾಕಾ:ಬಾಂಗ್ಲಾದೇಶದ ಶಿಬಿರದಲ್ಲಿ ಜನಾಂಗೀಯ ರೋಹಿಂಗ್ಯಾ ನಿರಾಶ್ರಿತರ ಅಂತರಾಷ್ಟ್ರೀಯ ಪ್ರತಿನಿಧಿಯೊಬ್ಬರನ್ನು ಬುಧವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಹಿಬುಲ್ಲಾ (50 ವರ್ಷ) ಶಿಕ್ಷಕರಾಗಿದ್ದು ಪ್ರಮುಖ ನಿರಾಶ್ರಿತರ ನಾಯಕರಾಗಿ ಹೊರಹೊಮ್ಮಿದ್ದರು ಹಾಗೂ ಅಂತರಾಷ್ಟ್ರೀಯ ಸಭೆಗಳಲ್ಲಿ ಮುಸ್ಲಿಂ ಜನಾಂಗವನ್ನು ಪ್ರತಿನಿಧಿಸುವ ವಕ್ತಾರರಾಗಿದ್ದರು. ಅವರು 2019 ರಲ್ಲಿ ಶ್ವೇತಭವನಕ್ಕೆ ಭೇಟಿ ನೀಡಿದ್ದರು. ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಸಭೆ ನಡೆಸಿದರು ಹಾಗೂ ಮ್ಯಾನ್ಮಾರ್ನಲ್ಲಿ ರೋಹಿಂಗ್ಯಾಗಳು ಎದುರಿಸುತ್ತಿರುವ ಯಾತನೆ ಹಾಗೂ ಕಿರುಕುಳದ ಬಗ್ಗೆ ಮಾತನಾಡಿದರು.
ಅದೇ ವರ್ಷ ಅವರು ಬಾಂಗ್ಲಾದೇಶದ ಮಾಧ್ಯಮಗಳಿಂದ ಕಟುವಾಗಿ ಟೀಕೆಗೆ ಗುರಿಯಾದರು. ಮ್ಯಾನ್ಮಾರ್ ಮಿಲಿಟರಿಯ ದಮನದ ಎರಡನೇ ವಾರ್ಷಿಕೋತ್ಸವದ ಅಂಗವಾಗಿ 200,000 ನಿರಾಶ್ರಿತರ ಬೃಹತ್ ರ್ಯಾಲಿಯನ್ನುಆಯೋಜಿಸಿದ್ದರು. ಮೊಹಿಬುಲ್ಲಾ ಸೇರಿದಂತೆ ಸುಮಾರು 700,000 ರೋಹಿಂಗ್ಯಾಗಳು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದರು.
ಕಾಕ್ಸ್ ಬಝಾರ್ ಜಿಲ್ಲೆಯ ಉಖಿಯಾದಲ್ಲಿರುವ ಕುಟುಪಲಾಂಗ್ ನಿರಾಶ್ರಿತರ ಶಿಬಿರದಲ್ಲಿ ಮೊಹಿಬುಲ್ಲಾ ಅವರನ್ನು ಅಪರಿಚಿತ ದಾಳಿಕೋರರು ಗುಂಡು ಹಾರಿಸಿದರು ಎಂದು ಕಾಕ್ಸ್ ಬಝಾರ್ನ ಸಶಸ್ತ್ರ ಪೊಲೀಸ್ ಬೆಟಾಲಿಯನ್ ಕಮಾಂಡರ್ ನೈಮುಲ್ ಹಕ್ ಹೇಳಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಅವರು ಮೃತಪಟ್ಟಿರುವುದಾಗಿ ಘೋಷಿಸಲಾಯಿತು.