ಸುದ್ದಿ

ಮನೋ ವೈದ್ಯೆಯಿಂದ ಕಳುವು ಆಗಿದ್ದ ಮಗು ಮೂಲ ತಾಯಿ ಮಡಿಲಿಗೆ ಸೇರಿತು!

ಬೆಂಗಳೂರು ಸೆ. 30: ಚಾಮರಾಜಪೇಟೆ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಕಳುವು ಆಗಿದ್ದ ಮಗು ಒಂದೂವರೆ ವರ್ಷದ ಬಳಿಕ ತಾಯಿ ಮಡಿಲು ಸೇರಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೊಪ್ಪಳದ ದಂಪತಿ ಬಳಿಯಿದ್ದ ಮಗುವನ್ನು ಬೆಂಗಳೂರಿನ ಪಾದರಾಯನಪುರದಲ್ಲಿರುವ ಹೆತ್ತ ತಾಯಿ ಮಡಿಲಿಗೆ ಒಪ್ಪಿಸಿದ್ದಾರೆ. ಮನೋವೈದ್ಯೆ ರಶ್ಮಿ ಮಗು ಕದ್ದ ಪ್ರಕರಣಕ್ಕೆ ಕೊನೆಗೂ ತಾರ್ಕಿಕ ಅಂತ್ಯ ಸಿಕ್ಕಿದೆ.

ಎರಡು ವರ್ಷದಿಂದ ಕದ್ದ ಮಗುವನ್ನು ರಾಜಕುಮಾರನಂತೆ ಸಾಕಿದ ಸಾಕು ತಾಯಿ ಇದೀಗ ಕಣ್ಣೀರು ಹಾಕುತ್ತಿದ್ದಾರೆ. ಜನ್ಮ ಕೊಟ್ಟ ಮಗು ಪಡೆಯಲು ಡಿಎನ್‌ಎ ಪರಿಕ್ಷೆಗೆ ಒಳಪಟ್ಟ ಹೆತ್ತ ತಾಯಿ ತಂದೆ ಇದೀಗ ಮಗುವನ್ನು ಪಡೆದ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಕದ್ದ ಮಗುವಿನ ಸಾಕು ತಾಯಿ ಹಾಗೂ ಜನ್ಮ ಕೊಟ್ಟ ಪೋಷಕರ ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದ್ದ ಪೊಲೀಸರು ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪಾದರಾಯನಪುರದ ಉಸ್ಮಾಭಾನು ನವೀದ್ ಪಾಷಾ ದಂಪತಿಗೆ ಕೊನೆಗೂ ಮಗುವನ್ನು ಒಪ್ಪಿಸಿದ್ದಾರೆ.

ಏನಿದು ಪ್ರಕರಣ:

2020 ಮೇ ನಲ್ಲಿ ಮಗು ಕಳ್ಳತನ: ಚಾಮರಾಜಪೇಟೆ ಹೆರಿಗೆ ಆಸ್ಪತ್ರೆಯಲ್ಲಿ ಆಗತಾನೇ ಜನಿಸಿದ್ದ ಮಗು ಕಳ್ಳತನವಾಗಿತ್ತು. ಮಹಿಳೆಯೊಬ್ಬಳು ಆಟೋದಲ್ಲಿ ಮಗು ಎತ್ತಿಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮಗು ಕಳೆದುಕೊಂಡಿದ್ದ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತು ವಿಶೇಷ ತಂಡ ರಚನೆ ಮಾಡಿ ತನಿಖೆ ಮಾಡುವಂತೆ ದಕ್ಷಿಣ ವಿಭಾಗದ ಡಿಸಿಪಿ ಆದೇಶಿಸಿದ್ದರು.

ಮನೋವೈದ್ಯೆಯ ಕೈಚಳಕ:

ಕೊಪ್ಪಳ ಮೂಲದ ದಂಪತಿಗೆ ಮಗು ಆಗಿರಲಿಲ್ಲ. ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೇಳೆ ಪರಿಚಿತವಾಗಿದ್ದ ಮನೋ ವೈದ್ಯೆ ರಶ್ಮಿ, ನಿಮಗೆ ಐವಿಎಫ್ ತಂತ್ರಜ್ಞಾನ ಮೂಲಕ ಮಗು ಕೊಡಿಸಲಾಗುವುದು ಎಂದು ಹೇಳಿದ್ದಳು. ಅದರಂತೆ ದಂಪತಿಯ ಅಂಡಾಣು ಮತ್ತು ವೀರ್ಯಾಣು ಸಂಗ್ರಹಿಸಿದ್ದ ರಶ್ಮೀ, ಬಾಡಿಗೆ ತಾಯಿಯ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿದೆ. ನಿಮಗೆ ಶೀಘ್ರದಲ್ಲಿಯೇ ಮಗು ನೀಡುವುದಾಗಿ ನಂಬಿಸಿದ್ದಳು. ಇದನ್ನು ನಂಬಿದ್ದ ದಂಪತಿ ಬರೋಬ್ಬರಿ ಹದಿನೈದು ಲಕ್ಷ ರೂ. ಹಣವನ್ನು ನೀಡಿದ್ದರು. ಆಗತಾನೇ ಜನಿಸಿದ ಮಗುವನ್ನು ಕದ್ದಿದ್ದ ವೈದ್ಯೆ ರಶ್ಮಿ ಆಟೋದಲ್ಲಿ ಪರಾರಿಯಾಗಿದ್ದಳು. ಆನಂತರ ಮಗುವನ್ನು ಕೊಪ್ಪಳ ಮೂಲದ ದಂಪತಿಗೆ ನೀಡಿ ಬಾಕಿ ಹಣ ಪಡೆದಿದ್ದಳು. ಮಗು ಕಳೆದುಕೊಂಡಿದ್ದ ತಾಯಿ ಕಣ್ಣೀರು ಹಾಕುತ್ತಾ ಶಂಕರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆ ನಂತರ ಪ್ರಕರಣವನ್ನು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button