ಎಲೆಕ್ಟ್ರಾನಿಕ್ ಮೇಲ್ಸೇತುವೆ ಅಪಘಾತ ಪ್ರಕರಣ: ಆರೋಪಿ ನಿತಿನ್‌ಗೆ ಜಾಮೀನು
ಬೆಂಗಳೂರು, ಸೆ. 30: “ನಾನು ಕಾರನ್ನು ತುಂಬಾ ವೇಗವಾಗಿ ಚಾಲನೆ ಮಾಡುತ್ತಿದ್ದೆ. ಅಲ್ಲಿಗೆ ಬಂದಾಗ ನನಗೆ ಏನಾಯಿತೋ ಗೊತ್ತಿಲ್ಲ. ಸದ್ದು ಕೇಳಿಸಿದ್ದು ಅಷ್ಟೇ, ನಾನು ಪ್ರಜ್ಞೆ ಕಳೆದುಕೊಂಡೆ. ರಸ್ತೆ ಬಿಟ್ಟು ಪಕ್ಕಕ್ಕೆ ನಾನು ಯಾಕೆ ಕಾರು ತಿರುಗಿಸಿದೆ ಎಂಬುದು ನನಗೆ ಗೊತ್ತಿಲ್ಲ” !
ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಬಳಿ ಕಾರು ಡಿಕ್ಕಿ ಹೊಡೆದು ಇಬ್ಬರ ಜೀವ ತೆಗೆದ ಕಾರು ಚಾಲಕ ನಿತೇಶ್ ಪೊಲೀಸರಿಗೆ ನೀಡಿರುವ ಹೇಳಿಕೆ ಇದು. ಕಾರಿನಲ್ಲಿದ್ದ ನಿತೇಶ್ ಗೂ ಬೆನ್ನು ಮೂಳೆ ಮುರಿದಿದೆ. ಕಾಲುಗಳಿಗೆ ಪೆಟ್ಟಾಗಿದ್ದು, ಎದೆ, ಹಿಪ್ಸ್ ಗೂ ತೀವ್ರತರ ಪೆಟ್ಟಾಗಿದೆ. ಈವರೆಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಓಡಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿ ನಿತೇಶ್ ಹೇಳಿಕೆ ಹಾಗೂ ವೈದ್ಯಕೀಯ ದಾಖಲೆ ಆಧರಿಸಿ ಪೊಲೀಸ್ ಠಾಣೆಯಿಂದಲೇ ಜಾಮೀನು ಮಂಜೂರು ಮಾಡಲಾಗಿದೆ. ಆತ ಎದ್ದು ಓಡಾಡುವ ಪರಿಸ್ಥಿತಿಯಲ್ಲಿ ಇಲ್ಲದ ಕಾರಣ ಆಸ್ಪತ್ರೆಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರೇ ಭೇಟಿ ನೀಡಿ ಹೇಳಿಕೆ ಪಡೆದಿದ್ದಾರೆ.
ಡ್ರಗ್ ಸೇವನೆ ಕುರಿತ ಸಂಶಯ : ಇನ್ನು ಅತಿ ವೇಗವಾಗಿ ಕಾರು ಚಾಲನೆ ಮಾಡಿ ಇಬ್ಬರ ಜೀವ ತೆಗೆದ ನಿತೇಶ್ ಕ್ರಿಕೆಟ್ ಆಟವಾಡಿ ಮನೆಗೆ ವಾಪಸು ಆಗುತ್ತಿದ್ದ. ಆಯಾಸದಿಂದ ಮೈ ಮರೆತು ಕಾರು ಡಿಕ್ಕಿ ಹೊಡೆದನೇ ? ಅಥವಾ ಮಾದಕ ಪದಾರ್ಥ ಸೇವನೆ ಮಾಡಿದ್ದೇನೆ ? ಇಲ್ಲವೇ ಕುಡಿದು ವಾಹನ ಚಾಲನೆ ಮಾಡುತ್ತಿದ್ದನೇ? ಎಂಬುದರ ಮೂಲ ಪತ್ತೆ ಮಾಡಲು ಸಂಚಾರ ಪೊಲೀಸ್ ತನಿಖಾಧಿಕಾರಿಗಳು ಮುಂದಾಗಿದ್ದಾರೆ. ನಿರ್ಲಕ್ಷ್ ಚಾಲನೆ ಮಾಡಿ ಇಬ್ಬರ ಜೀವ ತೆಗೆದ ನಿತೇಶ್ ಆಸ್ಪತ್ರೆಯಲ್ಲಿಯೇ ಬಂಧನಕ್ಕೆ ಒಳಗಾಗಿ ಠಾಣಾ ಜಾಮೀನು ಮೇಲೆ ಬಿಡುಗಡೆಯಾಗಿದ್ದಾನೆ. ಅಪಘಾತ ಸಂಬಂಧ ಎಲ್ಲ ಆಯಾಮದಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.