ಸಿನಿಮಾ

ಜವಾರಿ ಸಿನಿಮಾ: ‘ಬಯಲು ಸೀಮೆ’ ರಗಡ್‌ ಕಥೆ

ಉತ್ತರ ಕರ್ನಾಟಕ ಮತ್ತು ಬಯಲು ಸೀಮೆಯ ಕಥೆಗಳನ್ನು ಇಟ್ಟುಕೊಂಡು ಆಗಾಗ್ಗೆ ಒಂದಷ್ಟು ಸಿನಿಮಾಗಳು ತೆರೆಗೆ ಬರುತ್ತಿರುತ್ತವೆ. ಈಗ ಅಂಥದ್ದೇ ಮತ್ತೂಂದು ಸಿನಿಮಾ ತೆರೆಗೆ ಬರೋದಕ್ಕೆ ರೆಡಿಯಾಗಿದೆ. ಅಂದಹಾಗೆ, ಈ ಸಿನಿಮಾದ ಹೆಸರೇ “ಬಯಲುಸೀಮೆ’.

ಉತ್ತರ ಕರ್ನಾಟಕದ ಜನ-ಜೀವನ, ಸಾಂಸ್ಕೃತಿಕ ಸೊಗಡು, ರಾಜಕೀಯ ಎಲ್ಲವೂ ಈ ಸಿನಿಮಾದಲ್ಲಿರುವುದರಿಂದ, ಸಿನಿಮಾದ ಕಥೆಗೆ ಸೂಕ್ತವೆಂಬ ಕಾರಣಕ್ಕೆ ಚಿತ್ರತಂಡ ಸಿನಿಮಾಕ್ಕೆ “ಬಯಲು ಸೀಮೆ’ ಎಂದು ಟೈಟಲ್‌ ಇಟ್ಟಿದೆಯಂತೆ.

ಬಹುತೇಕ ಉತ್ತರ ಕರ್ನಾಟಕದವರೇ ಸೇರಿ ನಿರ್ಮಿಸುತ್ತಿರುವ “ಬಯಲು ಸೀಮೆ’ ಚಿತ್ರಕ್ಕೆ ಲಕ್ಷ್ಮಣ್‌ ಸಾ ಶಿಂಗ್ರಿ ನಿರ್ಮಾಣವಿದ್ದು, ವರುಣ್‌ ಕಟ್ಟಿಮನಿ ನಿರ್ದೇಶನವಿದೆ.

ಚಿತ್ರದ ಬಗ್ಗೆ ಮಾತನಾಡುವ ಚಿತ್ರತಂಡ, “ಸಿನಿಮಾದ ಹೆಸರೇ ಹೇಳುವಂತೆ ಇಡೀ ಸಿನಿಮಾವನ್ನು ಉತ್ತರ ಕರ್ನಾಟಕ ಶೈಲಿಯಲ್ಲಿ ತೆರೆಮೇಲೆ ತರುತ್ತಿದ್ದೇವೆ. ಉತ್ತರ ಕರ್ನಾಟಕದ ಶೈಲಿಯ ರಗಡ್‌ ಕಥೆಗಳ ಬಗ್ಗೆ ಕನ್ನಡದ ಪ್ರೇಕ್ಷಕರರಲ್ಲಿ ಯಾವತ್ತಿಗೂ ಒಂದು ವಿಶೇಷ ಪ್ರೀತಿ ಜಾರಿಯಲ್ಲಿರುತ್ತೆ. ಅದೇ ಶೈಲಿಯಲ್ಲಿ ನಮ್ಮ ಸಿನಿಮಾ ಕೂಡ ಮಾಡಿದ್ದೇವೆ. ಎಂಭತ್ತರ ದಶಕ ಮತ್ತು ಇವತ್ತಿನ ಕಾಲಘಟ್ಟಗಳನ್ನೂ ಉತ್ತರ ಕರ್ನಾಟಕದ ಜವಾರಿ ಶೈಲಿಯಲ್ಲಿ ಕಟ್ಟಿಕೊಡಲಾಗಿದೆ. ಸಾಹೂರಾವ್‌ ಶಿಂಧೆ ಎಂಬ ಶ್ರೀàಮಂತ ವ್ಯಕ್ತಿಯ ಸುತ್ತ “ಬಯಲು ಸೀಮೆ’ಯ ಕಥೆ ಸಾಗುತ್ತದೆ. ಆತನ ಸುತ್ತ ಹಬ್ಬಿಕೊಳ್ಳುವ ಅಕ್ರಮ ಸಂಬಂಧ, ಅದರ ಹಿನ್ನೆಲೆಯಲ್ಲೊಂದು ಲವ್‌ ಸ್ಟೋರಿ ಹಾಗೂ ಅದರ ಗರ್ಭದಲ್ಲಿಯೇ ಹುಟ್ಟಿಕೊಳ್ಳೋ ರಣ ದ್ವೇಷ… ಹೀಗೆ ಹತ್ತಾರು ತಿರುವುಗಳು ಸಿನಿಮಾದಲ್ಲಿದೆ’ ಎಂದು ಕಥಾಹಂದರದ ವಿವರಣೆ ನೀಡುತ್ತದೆ.

ಇನ್ನು ಟಿ.ಎಸ್.ನಾಗಾಭರಣ, ರವಿಶಂಕರ್‌, ಸಂಯುಕ್ತಾ ಹೊರನಾಡು, ಯಶ್‌ ಶೆಟ್ಟಿ, ಭವಾನಿ ಪ್ರಕಾಶ್‌, ಅರ್ಚನಾ ಕೊಟ್ಟಿಗೆ, ವರುಣ್‌ ಕಟ್ಟಿಮನಿ, ಲಕ್ಷ್ಮೀ ನಾಡಗೌಡರ್‌, ಸಂತೋಷ್‌ ಉಪ್ಪಿನ್‌, ನಾಗರಾಜ ಭಟ್‌, ಮಹೇಶ್‌ ದೊಡ್ಡಕೈನವರ್‌, ಪ್ರದೀಪ್‌ ರಾಜ್‌ ಮುಂತಾದವರು “ಬಯಲು ಸೀಮೆ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರಕ್ಕೆ ಸುಜಯ್‌ ಕುಮಾರ್‌ ಬಾವಿಕಟ್ಟಿ ಛಾಯಾಗ್ರಹಣ, ಕಿರಣ್‌ ಕುಮಾರ್‌ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಮಾನಸಾ ಹೊಳ್ಳ ಸಂಗೀತವಿದೆ.

Related Articles

Leave a Reply

Your email address will not be published. Required fields are marked *

Back to top button