‘ಕೋಟಿಗೊಬ್ಬ 3’ ಪೈರಸಿ ಕಾಟ: ಗೃಹ ಸಚಿವರಿಗೆ ದೂರು ನೀಡಿದ ನಿರ್ಮಾಪಕ
ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಸಿನಿಮಾ ಅಕ್ಟೋಬರ್ 14 ರಂದು ಚಿತ್ರಮಂದರಿಗಳಲ್ಲಿ ಬಿಡುಗಡೆ ಆಗುವುದು ಖಾತ್ರಿಯಾಗಿದೆ. ಆದರೆ ಸಿನಿಮಾ ಬಿಡುಗಡೆ ಆಗುವ ಮುನ್ನವೇ ಪೈರಸಿ ಕಾಟ ಆರಂಭವಾಗಿದೆ.
ಟೆಲಿಗ್ರಾಂ ಅಪ್ಲಿಕೇಶನ್‌ನಲ್ಲಿ ‘ಕೋಟಿಗೊಬ್ಬ 3’ ಹೆಸರಿನ ಚಾನೆಲ್‌ಗಳು ಹುಟ್ಟಿಕೊಂಡಿದ್ದು ಸಿನಿಮಾವನ್ನು ಪೈರಸಿ ಮಾಡಿ ಇದರಲ್ಲಿ ಪ್ರಕಟಿಸಲು ಈ ರೀತಿ ಚಾನೆಲ್‌ಗಳನ್ನು ಮಾಡಲಾಗಿದೆ ಎಂದು ಚಿತ್ರತಂಡ ಆರೋಪಿಸಿದೆ.
ತಮ್ಮ ಸಿನಿಮಾ ಪೈರಸಿ ಆಗುವುದನ್ನು ತಡೆಗಟ್ಟಬೇಕು ಎಂದು ‘ಕೋಟಿಗೊಬ್ಬ 3’ ಸಿನಿಮಾದ ನಿರ್ಮಾಪಕ ಸೂರಪ್ಪ ಬಾಬು ಇಂದು ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರನ್ನು ಭೇಟಿ ನೀಡಿ ದೂರು ನೀಡಿದ್ದಾರೆ. ದೂರಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ದೂರು ನೀಡಿದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ನಿರ್ಮಾಪಕ ಸೂರಪ್ಪ ಬಾಬು, ”ಹಲವು ಸಾಮಾಜಿಕ ಜಾಲತಾಣಗಳಲ್ಲಿ ಪೈರಸಿಯ ಚಾನೆಲ್‌ಗಳನ್ನು ತೆರೆದಿದ್ದಾರೆ. ನಾವು ಕಳೆದ ಒಂದು ವಾರದಿಂದ ಇವುಗಳನ್ನೆಲ್ಲ ಪತ್ತೆ ಹಚ್ಚುತ್ತಿದ್ದೇವೆ. ಆದರೆ ನಮಗೆ ಅವರ ಮೊಬೈಲ್ ಸಂಖ್ಯೆಗಳು ಸಿಗುತ್ತಿಲ್ಲ. ಹಾಗಾಗಿ ನಾವೆಲ್ಲ ನಿಶ್ಚಯಿಸಿ ಗೃಹ ಸಚಿವರ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ ದೂರು ನೀಡಿದ್ದೇವೆ. ಬೆಂಗಳೂರು ಪೊಲೀಸ್ ಆಯುಕ್ತರನ್ನು ಹಾಗೂ ಸೈಬರ್ ವಿಭಾಗದ ಆಯುಕ್ತರನ್ನು ಭೇಟಿಯಾಗಿ ದೂರು ನೀಡಲಿದ್ದೇವೆ” ಎಂದರು.”ನಿರ್ಮಾಪಕನಾಗಿ ನಮ್ಮ ಸಿನಿಮಾವನ್ನು ಉಳಿಸಿಕೊಳ್ಳಲು ಏನು ಪ್ರಯತ್ನ ಮಾಡಬೇಕೊ ಅದನ್ನೆಲ್ಲ ಮಾಡುತ್ತಿದ್ದೇನೆ. ನನ್ನ ಸಿನಿಮಾವನ್ನು ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿ, ಮಿತಿ ಮೀರಿದಾಗಷ್ಟೆ ನಮ್ಮ ನಾಯಕ ನಟರನ್ನು ನಾವು ಕರೆಯಬೇಕಾಗುತ್ತದೆ. ಈ ಸಣ್ಣ ವಿಷಯಗಳಿಗೆಲ್ಲ ಸುದೀಪ್ ಅವರನ್ನು ಕರೆಯಲು ಆಗುವುದಿಲ್ಲ. ಅವರು ಬರುತ್ತಾರೆಂದರೆ ಜನ ಸೇರಿ ಸಮಸ್ಯೆ ಆಗುತ್ತೆ, ಕೋವಿಡ್ ನಿಯಮವನ್ನೂ ಪಾಲಿಸಬೇಕಿದೆ. ನಿರ್ಮಾಪಕನಾಗಿ ನಾನೇ ಮುಂಚೂಣಿಯಲ್ಲಿ ನಿಂತು ಎಲ್ಲೆಡೆ ಓಡಾಡುತ್ತಿದ್ದೇನೆ” ಎಂದಿದ್ದಾರೆ ಸೂರಪ್ಪ ಬಾಬು.