ಸಿಎಂ ಬಳಿ ಹೊಸ ಬೇಡಿಕೆ ಇಟ್ಟ ಸಾಹುಕಾರ್..!
ಬೆಂಗಳೂರು,ಸೆ.29-ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೋಮವಾರ ತಡರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸುದೀರ್ಘ ಒಂದು ಗಂಟೆ ಕಾಲ ಮಾತುಕತೆ ನಡೆಸಿದ್ದಾರೆ. ರಾಜಕೀಯ ಪಿತೂರಿಗೆ ಬಲಿಪಶು ಆಗಿರುವ ತಮ್ಮನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಬೆಳಗಾವಿ ಪ್ರಬಾವಿ ನಾಯಕ ರಮೇಶ್ ಜಾರಕಿಹೊಳಿ ಸಿಎಂ ಬಳಿ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ನನಗೆ ಸಚಿವ ಸ್ಥಾನ ನೀಡಲು ಸಾಧ್ಯವಾಗದಿದ್ದರೇ ತಮ್ಮ ಸಹೋದರ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗಾದರೂ ಸಂಪುಟದಲ್ಲಿ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ. ಸಂಪುಟ ವಿಸ್ತರಣೆ ಸಂಬಂಧ ಸಿಎಂ ಬೊಮ್ಮಾಯಿ ಮುಂದಿನ ವಾರ ದೆಹಲಿಗೆ ತೆರಳುವ ಸಾಧ್ಯತೆಯಿದೆ, ಈ ವೇಳೆ ಖಾಲಿಯಿರುವ ನಾಲ್ಕು ಸಚಿವ ಸ್ಥಾನಗಳ ಭರ್ತಿ ಮತ್ತ ನಿಗಮ ಮಂಡಳಿಗಳ ನೇಮಕಾತಿ ಪಟ್ಟಿ ಅಂತಿಮಗೊಳಿಸುವ ನಿರೀಕ್ಷೆಯಿದೆ.
ಸರಿಯಾದ ಸಮಯದಲ್ಲಿ ಸೂಕ್ತಕ್ರಮ ಕೈಗೊಳ್ಳುವುದಾಗಿ ಬೊಮ್ಮಾಯಿ ಜಾರಕಿಹೊಳಿಗೆ ಭರವಸೆ ನೀಡಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆ ಮತ್ತು ಇತರ ಚುನಾವಣೆಗಳಿಗೆ ಕೆಲವೇ ತಿಂಗಳು ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸದ್ಯ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಬಯಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಸಂಪುಟಕ್ಕೆ ಮತ್ತೆ ಸೇರಿಕೊಳ್ಳಲು ರಮೇಶ್ ಜಾರಕಿಹೊಳಿ ಲಾಬಿ ನಡೆಸುತ್ತಿದ್ದಾರೆ ಎಂದು ವಿಶ್ವಸಾರ್ಹ ಮೂಲಗಳು ತಿಳಿಸಿವೆ, ಆದರೆ ಮತ್ತೆ ಸಚಿವರಾಗಿ ಸಂಪುಟ ಸೇರುವುದು ಸುಲಭದ ಮಾತಲ್ಲ, ಮತ್ತೆ ಸರ್ಕಾರಕ್ಕೆ ಬೆದರಿಕೆ ಒಡ್ಡಬಹುದು. ಆದರೆ ವಾಲ್ಮೀಕಿ ಸಮುದಾಯದ ಮತ್ತೊಬ್ಬ ನಾಯಕ ಶ್ರೀರಾಮುಲು ಪಕ್ಷದಲ್ಲಿರುವುದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ. ಸದ್ಯ ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಹೈಕೋರ್ಟ್‍ನಲ್ಲಿದ್ದು, ಕ್ಲೀನ್‍ಚಿಟ್ ಪಡೆದರೇ ಮಾತ್ರ ಸಂಪುಟ ಸೇರಲು ಸಾಧ್ಯ.
ಸದ್ಯ ಇರುವ ಪರಿಸ್ಥಿತಿಯಲ್ಲಿ ಸಿಎಂ ಬೊಮ್ಮಾಯಿ ಜಾರಕಿಹೊಳಿ ಸಹೋದರರನ್ನು ಎದುರು ಹಾಕಿಕೊಳ್ಳುವುದಿಲ್ಲ, ಏಕೆಂದರೇ ಬೆಳಗಾವಿ ರಾಜಕೀಯವನ್ನು ಗಮನದರಲ್ಲಿರಿಸಿಕೊಂಡಿರುವ ಪಕ್ಷ, ರಮೇಶ್ ಬದಲಿಗೆ ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ನಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಹೇಳಲಾಗುತ್ತಿದೆ.