ಸುದ್ದಿ
ಅರಸೀಕೆರೆ ಜಂಕ್ಷನ್ ಸಮೀಪ ನಿಂತಿದ್ದ ರೈಲಿಗೆ ಬೆಂಕಿ, 2 ಬೋಗಿಗಳು ಭಸ್ಮ..!
ಹಾಸನ: ನಿಂತಿದ್ದ ರೈಲಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿದ ಹಿನ್ನೆಲೆ ಎರಡಕ್ಕೂ ಅಧಿಕ ಬೋಗಿಗಳು ಸುಟ್ಟು ಕರಕಲಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಅರಸೀಕೆರೆ ರೈಲ್ವೆ ಜಂಕ್ಷನ್ ಸಮೀಪದ ಅಂಚೆಕೊಪ್ಪಲು ಬಳಿ ಈ ಅವಘಡ ಸಂಭವಿಸಿದೆ. ಬೆಂಗಳೂರಿನಿಂದ ವಾಪಸ್ಸಾಗಿ ಎರಡು ದಿನಗಳಿಂದ ಅರಸೀಕೆರೆ ಜಂಕ್ಷನ್ ನಲ್ಲಿ ರೈಲು ನಿಂತಿತ್ತು. ನಾಳೆ ಎಂದಿನಂತೆ ಮತ್ತೆ ಕಾರ್ಯ ನಿರ್ವಹಿಸಬೇಕಾಗಿತ್ತು.
ಆದರೆ, ಬ್ಯಾಟರಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬೆಂಕಿ ಹತ್ತಿಕೊಂಡ ಹಿನ್ನೆಲೆ ಎರಡು ಭೋಗಿಗಳ ಆಸನಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ದುರಂತ ಸಂಭವಿಸಿದ ಸಮೀಪದಲ್ಲಿಯೇ ಇಂಧನ ಶೇಖರಣಾ ಘಟಕವಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.