ಕಟಪಾಡಿ ಬಳಿ ಅಪರಿಚಿತ ವಾಹನ ಢಿಕ್ಕಿ|ಮೀನುಗಾರ ಗಿರೀಶ್ ಮೆಂಡನ್ ಸಾವು
ಕಾಪು: ಪತ್ನಿಯ ಮನೆಗೆ ತೆರಳಿ, ಅಲ್ಲಿಂದ ವಾಪಸ್ಸಾಗುವಾಗ ಬಸ್ ಮಿಸ್ ಆಗಿ ನಡೆದುಕೊಂಡೇ ಕಾಪುವಿಗೆ ಮರಳುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ರಾ. ಹೆ. 66ರ ಕಟಪಾಡಿಯಲ್ಲಿ ಸೆ. 27ರ ಮಧ್ಯರಾತ್ರಿ ನಡೆದಿದೆ.
ಕಾಪು ಪಡು ಗ್ರಾಮ ನಿವಾಸಿ ಗಿರೀಶ್ ಮೆಂಡನ್ (39) ಮೃತ ವ್ಯಕ್ತಿ. ಮೃತ ಗಿರೀಶ್ ಮೆಂಡನ್ ಮೀನುಗಾರಿಕಾ ವೃತ್ತಿ ನಡೆಸುತ್ತಿದ್ದ. ಈತ ಕೆಲಸ ಮಾಡುತ್ತಿದ್ದ ಬೋಟ್ ಸೆ. 27ರಂದು ಮಂಗಳೂರಿನಲ್ಲಿ ಲಂಗರು ಹಾಕಿತ್ತು. ಅಲ್ಲಿಂದ ಮೀನು ತೆಗೆದುಕೊಂಡು ಮನೆಗೆ ಬಂದಿದ್ದ ಆತ, ಸಂಜೆ ಮಂದಾರ್ತಿಯಲ್ಲಿರುವ ಪತ್ನಿಯ ಮನೆಗೆ ಮೀನು ಕೊಟ್ಟು, ಅಲ್ಲಿಂದ ಮತ್ತೆ ವೃತ್ತಿಗಾಗಿ ಮಂಗಳೂರಿಗೆ ತೆರಳುತ್ತಿದ್ದ. ಈ ವೇಳೆ ಉಡುಪಿಯಿಂದ ತೆರಳುತ್ತಿದ್ದ ಅಪರಿಚಿತ ವಾಹನ ಢಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ದೇಹ ಸಂಪೂರ್ಣ ನಜ್ಜುಗುಜ್ಜಾಗಿದ್ದು ಪೊಲೀಸರ ಸೂಚನೆಯಂತೆ ಮೃತರ ಸಹೋದರ ಕಿಶೋರ್ ಮೆಂಡನ್ ಸ್ಥಳಕ್ಕೆ ತೆರಳಿ ಮೃತದೇಹದ ಗುರುತು ಪತ್ತೆ ಮಾಡಿದ್ದಾರೆ. ಅಪಘಾತದ ವಿಷಯ ತಿಳಿದ ಕಾಪು ಪೊಲೀಸರು ಸ್ಥಳಕ್ಕೆ ಧಾವಿಸಿದರಾದರೂ ಮೃತದೇಹವನ್ನು ಸಾಗಿಸಲು ಅಂಬುಲೆನ್ಸ್ ಗಾಗಿ ಪರದಾಡುವಂತಾಯಿತು. ಕೊನೆಗೆ ಸಮಾಜ ಸೇವಕ ವಿಶು ಶೆಟ್ಟಿ ಅವರನ್ನು ಸಂಪರ್ಕಿಸಿ ಲೈಫ್ ಕೇರ್ ಅಂಬುಲೆನ್ಸ್ ಮುಖಾಂತರ ಮೃತ ದೇಹವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿದರು.
ಘಟನೆ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.