ಪಂಜಾಬ್: ನವಜೋತ್ ಸಿಂಗ್ ಸಿಧು ಮನವೊಲಿಸಲು ಕಾಂಗ್ರೆಸ್ ಕಸರತ್ತು
ಚಂಡೀಗಡ: ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನವಜೋತ್ ಸಿಂಗ್ ಸಿಧು ಮನವೊಲಿಸಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ.
ಸಿಧು ಅವರ ರಾಜೀನಾಮೆಯನ್ನು ಹೈಕಮಾಂಡ್ ಅಂಗೀಕರಿಸಿಲ್ಲ. ಬದಲಿಗೆ ಭಿನ್ನಮತ ಸರಿಪಡಿಸಿಕೊಳ್ಳುವಂತೆ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಮತ್ತು ಇತರ ನಾಯಕರಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಪಂಜಾಬ್‌ನಲ್ಲಿ ಪಕ್ಷವು ಎರಡು ಬಣಗಳನ್ನು ಹೊಂದಿರುವುದು ಹೈಕಮಾಂಡ್‌ಗೆ ಬೇಕಾಗಿಲ್ಲ. ಹೀಗಾಗಿ ಸಮಸ್ಯೆ ಬಗೆಹರಿಸಿಕೊಳ್ಳಲು ರಾಜ್ಯ ನಾಯಕರಿಗೆ ನೆರವಾಗುವಂತೆ ಪಂಜಾಬ್‌ನ ಉಸ್ತುವಾರಿ ಹರೀಶ್ ರಾವತ್, ನಾಯಕ ಕೆ.ಸಿ.ವೇಣುಗೋಪಾಲ್ ಅವರಿಗೆ ಸೂಚಿಸಿದೆ.
ಅಕಾಲಿ ದಳ ಮತ್ತು ಆಮ್ ಆದ್ಮಿ ಪಕ್ಷವು ರಾಜ್ಯದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ಅವಕಾಶಗಳನ್ನು ಬಳಸಿಕೊಳ್ಳಲು ಬಿಜೆಪಿಯೂ ಸೂಕ್ತ ಸಮಯಕ್ಕಾಗಿ ಕಾಯುತ್ತಿದೆ ಎಂಬುದೂ ಕಾಂಗ್ರೆಸ್ ಹೈಕಮಾಂಡ್‌ಗೆ ತಿಳಿದಿದೆ.
ಯುವ ನಾಯಕ ಕನ್ಹಯ್ಯಾ ಕುಮಾರ್ ಪಕ್ಷ ಸೇರ್ಪಡೆ, ಜಿಗ್ನೇಶ್ ಮೆವಾನಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಚಿಹ್ನೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿರುವ ಸಂಭ್ರಮದ ಮಧ್ಯೆಯೇ ಸಿಧು ರಾಜೀನಾಮೆ ಪಕ್ಷಕ್ಕೆ ಆಘಾತ ನೀಡಿತ್ತು.
ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಪಂಜಾಬ್ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ಕೆಲವೇ ದಿನಗಳಲ್ಲಿ ಸಿಧು ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ, ಅವರಿಗೆ ಬೆಂಬಲವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ರಜಿಯಾ ಸುಲ್ತಾನಾ, ಶಾಸಕ ಪರಗಟ ಸಿಂಗ್, ಪಂಜಾಬ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಗೌತಮ್ ಸೇಠ್ (ತರಬೇತಿ ಮೇಲ್ವಿಚಾರಣೆ), ಕಜಾಂಚಿ ಗುಲ್ಜರ್ ಇಂದರ್ ಚಾಹಲ್ ಸಹ ರಾಜೀನಾಮೆ ನೀಡಿದ್ದಾರೆ. ಸಿಧು ರಾಜೀನಾಮೆಗೆ, ನೂತನ ಸಚಿವರ ಖಾತೆ ಹಂಚಿಕೆ ಹಾಗೂ ಸರ್ಕಾರದಲ್ಲಿ ಇತ್ತೀಚೆಗೆ ಮಾಡಲಾದ ಕೆಲವು ನೇಮಕಾತಿಗಳ ಕುರಿತಾದ ಅಸಮಾಧಾನವೇ ಕಾರಣ ಎನ್ನಲಾಗಿದೆ.