ಪದವಿ: ಹೊಸ ಕೋರ್ಸ್‌ಗಳ ಆರಂಭಕ್ಕೆ ದೊರಕದ ಅನುಮತಿ
ಶಿವಮೊಗ್ಗ: ಪದವಿ ಕಾಲೇಜುಗಳ ಪ್ರವೇಶಕ್ಕೆ ಈ ಬಾರಿ ಅತ್ಯಧಿಕ ಬೇಡಿಕೆ ಇದ್ದು, ಹೊಸ ಕೋರ್ಸ್‌ಗಳ ಆರಂಭ ಹಾಗೂ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ಕೋರಿ ಹಲವು ಕಾಲೇಜುಗಳು ಪ್ರಸ್ತಾವ ಸಲ್ಲಿಸಿದ್ದರೂ ನಿಯಮಗಳ ಕಾರಣ ನೀಡಿ, ತ್ವರಿತವಾಗಿ ಅನುಮತಿ ನೀಡಲು ವಿಶ್ವವಿದ್ಯಾಲಯಗಳು ಹಿಂದೇಟು ಹಾಕುತ್ತಿವೆ.
ಕೊರೊನಾ ಕಾರಣ ಈ ಬಾರಿ ಪರೀಕ್ಷೆ ಇಲ್ಲದೆ ದ್ವಿತೀಯ ಪಿಯುನ 6.66 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಸಹಜವಾಗಿ ಕಲಾ, ವಾಣಿಜ್ಯ, ವಿಜ್ಞಾನ ಪದವಿಗಳ ಪ್ರವೇಶಕ್ಕೂ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ರಾಜ್ಯದಲ್ಲಿ 430 ಸರ್ಕಾರಿ ಹಾಗೂ 375 ಖಾಸಗಿ ಪದವಿ ಕಾಲೇಜುಗಳು ಇವೆ. 1.50 ಲಕ್ಷ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಹುದು. ಪ್ರತಿ ಕಾಲೇಜಿನಲ್ಲಿ ಶೇ 20ರಷ್ಟು ಹೆಚ್ಚುವರಿ ವಿದ್ಯಾರ್ಥಿಗಳನ್ನು ತುಂಬಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ. ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದಾಖಲು ಮಾಡಿಕೊಂಡ ಕಾಲೇಜುಗಳು ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರ ವರೆಗೆ ಮೊದಲ ಪಾಳಿ, ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಎರಡನೇ ಪಾಳಿಯಲ್ಲಿ ತರಗತಿ ನಡೆಸಲು ಕಾಲೇಜು ಶಿಕ್ಷಣ ಇಲಾಖೆ ಸಮ್ಮತಿಸಿದೆ. ಆದರೂ ಪ್ರವೇಶ ಬಯಸಿ ನಿತ್ಯವೂ ವಿದ್ಯಾರ್ಥಿ ಗಳು ಕಾಲೇಜುಗಳಿಗೆ ಎಡತಾಕುತ್ತಿದ್ದಾರೆ.
ರಾಜ್ಯದ 375 ಖಾಸಗಿ ಪದವಿ ಕಾಲೇಜುಗಳಲ್ಲಿ ಬಹುತೇಕ ಕಾಲೇಜುಗಳು ಈ ಬಾರಿ ಹೊಸ ಕೋರ್ಸ್‌ಗಳನ್ನು ಆರಂಭಿಸಲು ಅನುಮತಿ ಕೋರಿ ತಮ್ಮ ವ್ಯಾಪ್ತಿಯ ವಿಶ್ವವಿದ್ಯಾಲಯಕ್ಕೆ ಪ್ರಸ್ತಾವ ಸಲ್ಲಿಸಿವೆ. ಕಲಾ ಕಾಲೇಜುಗಳು ವಿಜ್ಞಾನ, ವಾಣಿಜ್ಯ ವಿಷಯಗಳಿಗೆ, ವಿಜ್ಞಾನ ಕಾಲೇಜುಗಳು ಕಲಾ ವಿಷಯಗಳ ಆರಂಭಕ್ಕೆ ಬೇಡಿಕೆ ಸಲ್ಲಿಸಿವೆ. ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮಗಳ ಪ್ರಕಾರ ಯಾವುದೇ ಕಾಲೇಜು ಹೊಸ ಕೋರ್ಸ್‌ಗಳ ಆರಂಭಕ್ಕೆ ಅನುಮತಿ ಕೋರಿದ ನಂತರ ಸ್ಥಳೀಯ ತಪಾಸಣಾ ಸಮಿತಿಗಳು ಭೇಟಿ ನೀಡಿ, ವಿಶ್ವವಿದ್ಯಾಲಯಕ್ಕೆ ವರದಿ ಸಲ್ಲಿಸುತ್ತವೆ. ಈ ವರದಿಯನ್ನು ವಿದ್ಯಾವಿಷಯಕ ಪರಿಷತ್, ಸಿಂಡಿಕೇಟ್‌ನಲ್ಲಿ ಮಂಡಿಸಿ, ಅನುಮೋದನೆ ಪಡೆದು ಉನ್ನತ ಶಿಕ್ಷಣ ಇಲಾಖೆಗೆ ಕಳುಹಿಸಲಾಗುತ್ತದೆ. ಅಲ್ಲಿ ಅನುಮತಿ ದೊರೆತ ನಂತರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಹುದು. ಈ ಎಲ್ಲ ಪ್ರಕ್ರಿಯೆ ಮುಗಿಯಲು ಕನಿಷ್ಠ ಆರು ತಿಂಗಳು ಬೇಕಾಗುತ್ತದೆ.
‘ಹೊಸ ಕೋರ್ಸ್‌ಗಳ ಸಂಯೋಜನೆ ಹಾಗೂ ಹಳೆಯ ಕೋರ್ಸ್‌ಗಳ ಮುಂದುವರಿಕೆಗೆ ಅನುಮತಿ ನೀಡುವ ಪ್ರಕ್ರಿಯೆಗಳು ಪ್ರತಿ ವರ್ಷ ಒಟ್ಟಿಗೆ ನಡೆಯುತ್ತವೆ. ಎಲ್ಲ ದಾಖಲೆಗಳನ್ನೂ ಆನ್‌ಲೈನ್ ಮೂಲಕವೇ ಅಪ್‌ಲೋಡ್ ಮಾಡಲು ಸಾಕಷ್ಟು ಸಮಯವಾಗುತ್ತದೆ. ಪ್ರಾಧಿಕಾರಗಳ ಸಭೆ ನಿಗದಿತ ಸಮಯಗಳಲ್ಲೇ ನಡೆಯುವುದರಿಂದ ಅನುಮತಿ ಪಡೆಯಲು ವಿಳಂಬವಾಗುತ್ತದೆ. ರಾಜ್ಯದ ಒಂದೆರಡು ಡೀಮ್ಡ್ ವಿಶ್ವವಿದ್ಯಾಲಯಗಳನ್ನು ಹೊರತುಪಡಿಸಿದರೆ ಇತರೆ ಯಾವ ವಿಶ್ವವಿದ್ಯಾಲಯಗಳೂ ಅನುಮತಿ ನೀಡಿಲ್ಲ. ಸರ್ಕಾರ ತ್ವರಿತ ಅನುಮತಿ ನೀಡಬೇಕು’ ಎನ್ನುತ್ತಾರೆ ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಶೈಕ್ಷಣಿಕ ಸಲಹೆಗಾರ ಡಾ.ರಾಜೇಂದ್ರ ಚೆನ್ನಿ.