ದೀದಿ ಸ್ಪರ್ಧಿಸುತ್ತಿರುವ ಭವಾನಿಪುರ ಉಪಚುನಾವಣೆ ಮುಂದೂಡಲು ಹೈಕೋರ್ಟ್ ನಕಾರ
ಕೊಲ್ಕತ್ತಾ, ಸೆ.28- ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸ್ಪರ್ಧೆಯಿಂದ ರೋಚಕತೆ ಪಡೆದಿರುವ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಮುಂದೂಡಲು ಹೈಕೋರ್ಟ್ ನಿರಾಕರಿಸಿದೆ. ಹಾಗಾಗಿ ನಿಗದಿತ ಕಾಲಾವಧಿಯಲ್ಲೇ ಮತದಾನ ನಡೆಯುವುದು ಖಚಿತವಾಗಿದೆ.
ಸಯನ್ ಬ್ಯಾನರ್ಜಿ ಎಂಬುವರು ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಕೇಂದ್ರ ಚುನಾವಣಾ ಆಯೋಗ ಪಶ್ಚಿಮ ಬಂಗಾಳದ ಮುಖ್ಯಕಾರ್ಯದರ್ಶಿ ಅವರು ಬರೆದಿರುವ ಪತ್ರ ಆಧರಿಸಿ ಚುನಾವಣೆ ನಡೆಸಲು ನಿರ್ಧರಿಸಿದೆ. ಹಾಗಾಗಿ ಉಪಚನಾವಣೆಯನ್ನು ಮುಂದೂಡಬೇಕು ಎಂದು ಮನವಿ ಮಾಡಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್, ಚುನಾವಣಾ ಆಯೋಗ ಸೇ.4ರಂದು ಪತ್ರಿಕಾ ಹೇಳಿಕೆ ನೀಡಿ ಚುನಾವಣಾ ವೇಳಾಪಟ್ಟಿಯನ್ನು ಘೋಷಣೆ ಮಾಡಿದೆ. ಅದರಂತೆ ಸೆ.30ರಂದು ಚುನಾವಣೆ ನಡೆಯಲಿದೆ. ಇದರಲ್ಲಿ ಚುನಾವಣೆ ಮುಂದೂಡಬೇಕಾದ ಹಾಗೂ ನ್ಯಾಯಾಯಲಯ ಮಧ್ಯ ಪ್ರವೇಶಿಸಬೇಕಾದ ಪರಿಸ್ಥಿತಿ ಕಂಡು ಬರುತ್ತಿಲ್ಲ ಎಂದು ನ್ಯಾಯಮೂರ್ತಿಗಳ ಅಭಿಪ್ರಾಯ ಪಟ್ಟಿದ್ದಾರೆ.
ಆದಾಗ್ಯೂ ಹೈಕೋರ್ಟ್‍ನ ನ್ಯಾಯಾಮೂರ್ತಿಗಳು ಪಶ್ಚಿಮ ಬಂಗಾಳದ ಮುಖ್ಯಕಾರ್ಯದರ್ಶಿ ಅವರ ಪತ್ರದ ಕುರಿತಂತೆ ಬಲವಾದ ಆಕ್ಷೇಪಣೆ ವ್ಯಕ್ತ ಪಡಿಸಿದ್ದಾರೆ. ಮುಖ್ಯಕಾರ್ಯದರ್ಶಿಗಳು ಸಾರ್ವಜನಿಕ ಸೇವಕರು. ಅವರು ಕಾನೂನು ಪ್ರಕಾರ ತಮ್ಮ ಕೆಲಸಗಳನ್ನು ನಿರ್ವಹಣೆ ಮಾಡಬೇಕು. ಯಾರೇ ಅಧಿಕಾರದಲ್ಲಿ ಇರಲಿ, ವೈಯಕ್ತಿಕವಾಗಿ ಯಾವುದೇ ವ್ಯಕ್ತಿ ಪರವಾಗಿ ವಕಾಲತ್ತು ವಹಿಸಬಾರದು. ಒಬ್ಬ ವ್ಯಕ್ತಿಯ ಗೈರು ಹಾಜರಿಯಲ್ಲಿ ಸಾಂವಿಧಾನಿಕ ಸಂಕಷ್ಟ ಎದುರಾಗಲಿದೆ ಎಂದು ಮುಖ್ಯಕಾರ್ಯದರ್ಶಿ ಪತ್ರ ಬರೆದಿರುವುದು ಸರಿಯಲ್ಲ ಆಕ್ಷೇಪಿಸಿದೆ.
ಇತ್ತೀಚೆಗೆ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ನೇತೃತ್ವದ ತೃಣಮೂಲ ಕಾಂಗ್ರೆಸ್ ಮೂರನೇ ಅವಧಿಗೆ ಅಧಿಕಾರಕ್ಕೆ ಮರಳಿತ್ತು. ಆದರೆ ನಂದಿಗ್ರಾಮದಲ್ಲಿ ಸ್ಪರ್ಧೆ ಮಾಡಿದ್ದ ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ಒಂದು ಕಾಲದ ತಮ್ಮ ಆಪ್ತನಾಗಿದ್ದ ಸೌಮೇಂದು ಅಧಿಕಾರಿ ವಿರುದ್ಧ ಸೋಲು ಕಂಡಿದ್ದರು.
ಚುನಾವಣೆ ಫಲಿತಾಂಶದ ಬಳಿಕ ಮುಖ್ಯಮಂತ್ರಿಯಾದ ಮಮತಾ ಬ್ಯಾನರ್ಜಿ ಆರು ತಿಂಗಳ ಒಳಗೆ ಶಾಸನ ಸಭೆಗೆ ಚುನಾಯಿತರಾಗಬೇಕಿದೆ. ಪಶ್ಚಿಮ ಬಂಗಾಳದಲ್ಲಿ ವಿಧಾನ ಪರಿಷತ್ ಇಲ್ಲದೆ ಇರುವುದರಿಂದ ವಿಧಾನಸಭೆಗೆ ಚುನಾವಣೆ ನಡೆಯುವುದು ಅನಿವಾರ್ಯವಾಗಿತ್ತು.
ಉಪಚುನಾವಣೆ ನಡೆದು ಮಮತಾ ಬ್ಯಾನರ್ಜಿ ಶಾಸಕರಾಗಿ ಆಯ್ಕೆಯಾಗದಿದ್ದರೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯಬೇಕಾಗುತ್ತದೆ. ಆಗ ಸಂವಿಧಾನತ್ಮಕ ತುರ್ತು ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಮುಖ್ಯಕಾರ್ಯದರ್ಶಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಈ ಪತ್ರ ವಿವಾದಕ್ಕೀಡಾಗಿದೆ.