ದಸರಾ ನಂತರ ಪ್ರಾಥಮಿಕ ಶಾಲೆಗಳು ಆರಂಭ
ಬೆಂಗಳೂರು,ಸೆ.28- ಸರಿಸುಮಾರು ಒಂದೂವರೆ ವರ್ಷದಿಂದ ಕೋವಿಡ್ ಕಾರಣಗಳಿಗಾಗಿ ಮುಚ್ಚಲ್ಪಟ್ಟಿರುವ ಪ್ರಾಥಮಿಕ ಶಾಲೆಗಳನ್ನು ದಸರಾ ಹಬ್ಬದ ನಂತರ ಆರಂಭಿಸಲು ಸರ್ಕಾರ ಮುಂದಾಗಿದೆ. ಈಗಾಗಲೇ ರಾಜ್ಯದಲ್ಲಿ 6 ರಿಂದ 12ನೇ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ದಸರಾ ಬಳಿಕ ಶೀಘ್ರವೇ ಪ್ರಾಥಮಿಕ ಶಾಲೆ ಆರಂಭವಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
1-5ನೇ ತರಗತಿಗಳ ಪ್ರಾರಂಭಕ್ಕೆ ಸರ್ಕಾರ ತಜ್ಞರ ಅಭಿಪ್ರಾಯ ಕೇಳಿದೆ. ತಜ್ಞರು ದಸರಾ ಬಳಿಕ ನೋಡೋಣ ಎಂದು ಸಲಹೆ ನೀಡಿದ್ದಾರೆ. ತಜ್ಞರ ವರದಿ ಆಧರಿಸಿ ಸರ್ಕಾರ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದೆ.
ವಾರದಲ್ಲಿ ಮೂರು ದಿನ ಮಾತ್ರ ತರಗತಿ ನಡೆಯಲಿದೆ. 3 ದಿನ ಆಫ್‍ಲೈನ್ ಮತ್ತು ಮೂರು ದಿನ ಆನ್‍ಲೈನ್ ಕ್ಲಾಸ್ ನಡೆಸಲು ಚಿಂತನೆ ನಡೆದಿದೆ. ಕಡ್ಡಾಯವಾಗಿ ಕೇವಲ ಬೆಳಗ್ಗೆ ಅವ ಮಾತ್ರ ತರಗತಿ ನಡೆಯಲಿದ್ದು, ವಿದ್ಯಾರ್ಥಿಗಳು ಹೆಚ್ಚಿರುವ ಕಡೆ 3+3 ದಿನ ತರಗತಿ ನಡೆಸಲು ಅನುಮತಿ ನೀಡುವ ಸಾಧ್ಯತೆಯಿದೆ.
ಶಾಲೆಗೆ ಹಾಜರಾತಿ ಕಡ್ಡಾಯ ಅಲ್ಲ. ಶಾಲೆಯಲ್ಲಿ ಕೊರೊನಾ ನಿಯಮ ಜಾರಿ ಸಂಬಂಧ ತಜ್ಞರ ವರದಿ ಆಧರಿಸಿ ವಿಶೇಷ ಮಾರ್ಗಸೂಚಿ ಪ್ರಕಟ ಮಾಡಿ ಆರಂಭಿಸಲು ಚಿಂತನೆ ನಡೆದಿದೆ.