ಯುವತಿಯ ಅತ್ಯಾಚಾರಗೈದು ಮದುವೆಯಾಗಲು ನಿರಾಕರಣೆ ➤ ಕಡಬದ ಕಾನ್ಸ್‌ಟೇಬಲ್ ಶಿವರಾಜ್ ಬಂಧನ, ಸೇವೆಯಿಂದ ಸಸ್ಪೆಂಡ್
ಕಡಬ, ಸೆ.28. ಅಪ್ರಾಪ್ತೆ ಯುವತಿಯನ್ನು ತನ್ನ ಕಾಮದಾಟಕ್ಕೆ ಬಳಸಿಕೊಂಡ ಆರೋಪದಲ್ಲಿ ಕಡಬ ಠಾಣೆಯ ಪೋಲಿಸ್ ಕಾನ್ಸ್‌ಟೇಬಲ್ ಶಿವರಾಜ್ ನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಣೆ ಭಗವಾನ್ ತಿಳಿಸಿದ್ದಾರೆ.
ಕಡಬ ಠಾಣೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಿವರಾಜ್ ವಿರುದ್ಧ ಯುವತಿಯ ತಂದೆ ನೀಡಿದ ದೂರಿನ ಮೇರೆಗೆ ಕಡಬ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಶಿವರಾಜ್ ನನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ತನಿಖೆಯನ್ನು ಮುಂದುವರಿಸಲಾಗಿದ್ದು, ಇದರ ಜೊತೆಗೆ ಆಂತರಿಕ ತನಿಖೆಯೂ ನಡೆಯಲಿದೆ. ಸಂತ್ರಸ್ತ ಯುವತಿ ಹಾಗೂ ಆಕೆಯ ತಾಯಿಯನ್ನು ಪತ್ತೆಹಚ್ಚಲಾಗಿದ್ದು, ವೈದ್ಯಕೀಯ ವರದಿ ತಯಾರಿಸಲಾಗುತ್ತಿದೆ. ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದವರು ಹೇಳಿದ್ದಾರೆ.
ಸಂತ್ರಸ್ತ ಯುವತಿಯ ತಂದೆಯು ಆರೋಪಿ ಶಿವರಾಜ್ ವಿರುದ್ಧ ಸೋಮವಾರದಂದು ದೂರು ನೀಡಿದ್ದು, ತನ್ನ ಮಗಳನ್ನು ಬಲತ್ಕಾರ ಮಾಡಿ ಅತ್ಯಾಚಾರ ಎಸಗಿ ಇದೀಗ ಗರ್ಭವತಿಯಾಗಲು ಕಾರಣನಾಗಿದ್ದು, ಗರ್ಭಪಾತ ನಡೆಸುವ ಸಲುವಾಗಿ ಯುವತಿಯನ್ನು ಮಂಗಳೂರಿನಲ್ಲಿ ಅಜ್ಞಾತ ಸ್ಥಳದಲ್ಲಿರಿಸಿದ್ದಾನೆ. ಅಲ್ಲದೆ ಗರ್ಭಪಾತ ನಡೆಸಲು ಹಣವನ್ನು ಕೂಡ ಪೋಲಿಸ್ ಸಿಬ್ಬಂದಿ ಶಿವರಾಜ್ ನೀಡಿದ್ದಾನೆ ಎಂದು ಕಡಬ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ದ.ಕ ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ, ಅಡಿಷನಲ್ ಎಸ್ಪಿ ಶಿವಕುಮಾರ್ ಗುನಾರೆ, ಡಿವೈಎಸ್ಪಿ ಗಾನ ಪಿ.ಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ್, ಕಡಬ ಠಾಣಾ ಪ್ರಭಾರ ಸಬ್ ಇನ್ಸ್‌ಪೆಕ್ಟರ್ ಕುಮಾರ್ ಸಿ.ಕಾಂಬ್ಲೆ ಭೇಟಿ ನೀಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.