ದತ್ತ ಪೀಠ ವಿಚಾರದಲ್ಲಿ ಹಿಂದೂಗಳ ನಂಬಿಕೆಗೆ ಪೂರಕವಾದ ಹೈಕೋರ್ಟ್ ತೀರ್ಪು: ಸಿ.ಟಿ.ರವಿ
ಬೆಂಗಳೂರು: ಹಿಂದೂಗಳ ಪವಿತ್ರ ಸ್ಥಾನ ಚಿಕ್ಕಮಗಳೂರು ಜಿಲ್ಲೆಯ ‘ಬಾಬಾ ಬುಡನ್‍ಗಿರಿ” ಗುರು ದತ್ತಾತ್ರೇಯ ಪೀಠದ ಪೂಜೆಗೆ ಮುಸ್ಲಿಂ ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್ ಅವರನ್ನು ನೇಮಿಸಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು 2018ರ ಮಾರ್ಚ್ 19ರಂದು ಆದೇಶ ಹೊರಡಿಸಿದ್ದರು. ಮೌಲ್ವಿ ನೇಮಕ ಆದೇಶ ರದ್ದು ಮಾಡಿ ಇಂದು ಹೈಕೋರ್ಟ್ ಆದೇಶ ನೀಡಿದ್ದು, ಈ ಮಹತ್ವದ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ದತ್ತ ಪೀಠದ ವಿಚಾರದಲ್ಲಿ ಹಿಂದೂಗಳ ಹೋರಾಟಕ್ಕೆ ಜಯ ಸಿಕ್ಕಿದೆ. ದತ್ತ ಮಾಲಾಧಾರಿಗಳು ಮತ್ತು ದತ್ತ ಪೀಠವನ್ನು ನಂಬುವ ಎಲ್ಲರಿಗೂ ಶುಭ ವಿಚಾರ ಬಂದಿದೆ. ಹೈಕೋರ್ಟ್ ನೀಡಿದ ತೀರ್ಪನ್ನು ಸ್ವಾಗತಿಸುತ್ತೇನೆ. ಯಾವತ್ತೂ ಸತ್ಯಕ್ಕೆ ಜಯ ಖಚಿತ ಎಂಬುದು ಇದರಿಂದ ದೃಢಪಟ್ಟಿದೆ ಎಂದು ಸಿ.ಟಿ.ರವಿ ಅವರು ತಿಳಿಸಿದ್ದಾರೆ.
ಈ ತೀರ್ಪು ಸಮಸ್ತ ಹಿಂದೂಗಳ ಧಾರ್ಮಿಕ ಭಾವನೆಗಳ ಗೌರವವನ್ನು ಎತ್ತಿಹಿಡಿದಂತಾಗಿದೆ. ಸಚಿವ ಸಂಪುಟ ಉಪ ಸಮಿತಿ ನೇಮಕ ಮಾಡಿದ್ದ ನ್ಯಾಯಮೂರ್ತಿ ನಾಗಮೋಹನ್ ದಾಸ್, ಹಂಪಿ ಕನ್ನಡ ವಿವಿಯ ರಹಮತ್ ತರೀಕೆರೆ, ಇತಿಹಾಸ ತಜ್ಞ ಷ.ಷಟ್ಟರ್ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯೇ ಕಾನೂನುಬಾಹಿರವಾಗಿತ್ತು. ನಾಗಮೋಹನ್ ದಾಸ್ ಸಮಿತಿ ವರದಿಯನ್ನು ವಜಾಗೊಳಿಸಿ ವಿಶ್ವಹಿಂದೂ ಪರಿಷತ್ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದೆ ಎಂದು ಅವರು ತಿಳಿಸಿದ್ದಾರೆ.
ದತ್ತಾತ್ರೇಯ ಪೀಠಕ್ಕೆ ಮೌಲ್ವಿಯನ್ನು ನೇಮಿಸಿದ್ದು ಸಮರ್ಪಕ ಕ್ರಮವಾಗಿರಲಿಲ್ಲ. ಹೀಗಾಗಿ ಈ ನೇಮಕವನ್ನು ಪ್ರಶ್ನಿಸಿದ ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನಾ ಸಮಿತಿಗೆ ಹೈಕೋರ್ಟ್ ನಿಂದ ಇಂದು ನ್ಯಾಯ ಸಿಕ್ಕಿದೆ. ಇದರಿಂದ ನ್ಯಾಯಾಂಗದ ಮೇಲಿನ ವಿಶ್ವಾಸ ಇನ್ನಷ್ಟು ವೃದ್ಧಿಸಿದೆ. ಈ ತೀರ್ಪನ್ನು ಹೃತ್ಪೂರ್ವಕವಾಗಿ ಸ್ವಾಗತಿಸುವುದಾಗಿ ಸಿ.ಟಿ.ರವಿ ಅವರು ತಿಳಿಸಿದ್ದಾರೆ.