ಸಿನಿಮಾ

ಚಿತ್ರಮಂದಿರಕ್ಕೆ 100% ಅನುಮತಿ: ಕಲಾಬಂಧುಗಳಲ್ಲೊಂದು ಜಗ್ಗೇಶ್ ವಿನಂತಿ

ಅಕ್ಟೋಬರ್ 1 ರಿಂದ ಕರ್ನಾಟಕದಲ್ಲಿ ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲಿದೆ. ಇಷ್ಟು ದಿನ ಶೇಕಡಾ 50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈಗ ಅಕ್ಟೋಬರ್ ತಿಂಗಳಿನಿಂದ 100% ಆಸನ ಭರ್ತಿಯೊಂದಿಗೆ ಚಲನಚಿತ್ರ ಪ್ರದರ್ಶನ ಮಾಡಬಹುದು. ಈ ಮೂಲಕ ಸ್ಯಾಂಡಲ್‌ವುಡ್ ಇಂಡಸ್ಟ್ರಿ ಹೊಸ ಹುಮ್ಮಸ್ಸಿನಿಂದ ಮತ್ತೆ ಕಾರ್ಯಾರಂಭ ಶುರು ಮಾಡಿದೆ.

100 ಪರ್ಸೆಂಟ್ ಅವಕಾಶ ಕೊಡಲಿ ಆಮೇಲೆ ಬಿಡುಗಡೆ ಮಾಡ್ತೇವೆ ಎಂದು ಕಾಯ್ತಿದ್ದ ಸ್ಟಾರ್ ನಟರ ಚಿತ್ರಗಳು ಈಗ ದಿನಾಂಕ ಪ್ರಕಟಿಸಿ ಚಿತ್ರಮಂದಿರಗಳನ್ನು ಕಾಯ್ದಿರಿಸಿವೆ. ಸುದೀಪ್ ನಟನೆಯ ಕೋಟಿಗೊಬ್ಬ 3, ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ಸಲಗ, ಶಿವರಾಜ್ ಕುಮಾರ್ ನಟನೆಯ ಭಜರಂಗಿ 2 ಚಿತ್ರಗಳು ರಿಲೀಸ್ ದಿನಾಂಕ ಘೋಷಿಸಿದೆ. ಇದರೊಂದಿಗೆ ಅಕ್ಟೋಬರ್ 1 ರಿಂದ ಗಾಂಧಿನಗರದ ಚಿತ್ರಮಂದಿರಗಳ ಬಳಿ ಹೌಸ್‌ಫುಲ್ ಪ್ರದರ್ಶನದ ನಾಮಫಲಕ ಮತ್ತೆ ಕಾಣಸಿಗುತ್ತದೆ.

ಹಲವು ತಿಂಗಳ ಬಳಿಕ ಚಿತ್ರಮಂದಿರಕ್ಕೆ 100% ಅನುಮತಿ ನೀಡಿದ್ದಕ್ಕಾಗಿ ಹಿರಿಯ ನಟ ಜಗ್ಗೇಶ್ ಸಂತಸ ವ್ಯಕ್ತಪಡಿಸಿದ್ದಾರೆ. ಕನ್ನಡ ಕಲಾಭಿಮಾನಿಗಳು ಥಿಯೇಟರ್‌ಗೆ ಬಂದು ಸಿನಿಮಾ ನೋಡಿ ಎಂದು ಟ್ವಿಟ್ಟರ್ ಮೂಲಕ ಕೇಳಿಕೊಂಡಿದ್ದಾರೆ.

”ಆತ್ಮೀಯ ಕನ್ನಡದ ಬಂಧುಗಳೆ ಕೊರೊನಾ ಸರ್ವ ದೇಶ ಜನರ ಸಂಕಷ್ಟಕ್ಕೆ ದೂಡಿತು. ಇಂಥ ಸಂಕಷ್ಟ ಸಮಯದಲ್ಲಿ ಅಲ್ಪಸ್ವಲ್ಪ ಜನರಿಗೆ ಸಂತೋಷ ನೀಡಿದ್ದು ಕಲೆ. ಅದು ಯಾವುದೇ ಭಾಷೆಯದ್ದಾಗಲಿ ಚಿತ್ರಮಂದಿರ ಬಂದ್ ಆದರು ಸಣ್ಣ ಪರದೆಯಲ್ಲಿ ನಿಮ್ಮ ರಂಜಿಸಿತು. ಅಂಥ ಕಲಾರಂಗ ಮತ್ತೆ ಚಿಗುರಿ ನಿಮ್ಮ ಮುಂದೆ ನಿಲ್ಲಬೇಕು ಎಂದರೆ ನೀವು ಹರಸಬೇಕು. ಇಂದು 100% ಚಿತ್ರಮಂದಿರ ತೆರೆದಿದೆ. ನಿಮ್ಮ ನೆಚ್ಚಿನ ನಟನಟಿ ಚಿತ್ರಗಳು ಇದೇ ಅಕ್ಟೋಬರ್ ಇಂದ ತೆರೆಗೆ ಬರುತ್ತಿದೆ. ಕುಟುಂಬ ಸಮೇತ ತಾವು ಚಿತ್ರಮಂದಿರಕ್ಕೆ ಬಂದು ನಿಮ್ಮ ನೆಚ್ಚಿನ ಚಿತ್ರಗಳನ್ನ ಚಿತ್ರಮಂದಿರದಲ್ಲೆ ನೋಡಿ ಆನಂದಿಸಿ..ಈ ಅಕ್ಟೋಬರ್ ಇಂದ ನನ್ನ ಆತ್ಮೀಯ ಕನ್ನಡದ ಕಲಾಬಂಧುಗಳ ಚಿತ್ರ ಬಿಡುಗಡೆ. ನಿಮ್ಮ ಸಂತೋಷ ಚಪ್ಪಾಳೆ ಸದ್ಧಿಗೆ ಕಾಯುತ್ತಿದೆ ಕಲಾರಂಗ ಧನ್ಯವಾದ” ಎಂದು ನಟ ಜಗ್ಗೇಶ್ ವಿನಂತಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button