ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ ಸಾಧ್ಯತೆ, ಆರೆಂಜ್ ಅಲರ್ಟ್ ಘೋಷಣೆ..!
ಬೆಂಗಳೂರು,ಸೆ.28- ರಾಜ್ಯದ ಉತ್ತರ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಗೆಯೇ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಅಕ ಮಳೆಯಾಗಲಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲೂ ಮಳೆಯಾಗಲಿದೆ. ಇನ್ನು ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗದಲ್ಲಿ ಸಾಧಾರಣ ಮಳೆಯಾಗಲಿದ್ದು, ಚಿಕ್ಕಬಳ್ಳಾಪುರ, ದಾವಣಗೆರೆ ಹಾಗೂ ತುಮಕೂರಿನಲ್ಲಿ ಒಣಹವೆ ಇರಲಿದೆ.
ಮುಂದಿನ 24 ಗಂಟೆಗಳಲ್ಲಿ, ಕರಾವಳಿಯ ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಒಡಿಶಾ, ಚತ್ತೀಸ್ಗಢದ ಕೆಲವು ಭಾಗಗಳು, ವಿದರ್ಭಾ, ಮರಾಠವಾಡ, ತೆಲಂಗಾಣ, ಮಧ್ಯಪ್ರದೇಶದ ಕೆಲವು ಭಾಗಗಳು, ಆಗ್ನೇಯ ರಾಜಸ್ಥಾನ , ಗುಜರಾತ್, ಕೇರಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಗುಲಾಬ್ ಚಂಡ ಮಾರುತದ ಪರಿಣಾಮ ಮಳೆಯಾಗುವ ನಿರೀಕ್ಷೆ ಇದ್ದು ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ, ಲಕ್ಷದ್ವೀಪ, ಕೊಂಕಣ ಮತ್ತು ಗೋವಾ, ಮಧ್ಯ ಮಹಾರಾಷ್ಟ್ರದಲ್ಲಿ ಸಹ ಮಳೆಯಾಗುವ ಸೂಚನೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನೈಋತ್ಯ ಮುಂಗಾರು ಜೂನ್ 1ರಿಂದ ಸೆ.30ರವರೆಗೆ ಭಾರೀ ಮಳೆಗೆ ಕಾರಣವಾಗುತ್ತದೆ. ಆದರೆ ಈ ಬಾರಿ ಮುಂಗಾರು ಇನ್ನೂ 10 ದಿನಗಳ ಕಾಲ ಮಂದುವರೆಯಬಹುದು ಎಂದು ಇಲಾಖೆ ತಿಳಿಸಿದೆ.
ಮಹಾರಾಷ್ಟ್ರದಲ್ಲಿಯೂ ಮಳೆ ಸುರಿದ ಕಾರಣ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹದ ಭೀತಿ ಎದುರಾಗಿತ್ತು. ಈಗ ಮುಂಗಾರು ಚುರುಕುಗೊಂಡಿದ್ದು, ಮಳೆಯ ಎಚ್ಚರಿಕೆ ಕೊಡಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿ ಆಂಧ್ರಪ್ರದೇಶಕ್ಕೆ ಅಪ್ಪಳಿಸಿದ್ದ ಗುಲಾಬ್ ಚಂಡಮಾರುತದ ಅಬ್ಬರ ಇದೀಗ ಕೊಂಚ ಕಡಿಮೆಯಾಗಿದ್ದು, ಚಂಡಮಾರುತವು ಪ್ರಸ್ತುತ ಪಶ್ಚಿಮ-ವಾಯುವ್ಯ ಭಾಗದತ್ತ ಮುಖ ಮಾಡಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಅಕಾರಿಗಳು ಮಾಹಿತಿ ನೀಡಿದ್ದಾರೆ.
ಒಡಿಶಾ-ಆಂಧ್ರಪ್ರದೇಶ ಗಡಿಭಾಗದಲ್ಲಿ ಗುಲಾಬ್ ಚಂಡಮಾರುತ ಅಪ್ಪಳಿಸಿತ್ತು. ಒಡಿಶಾದ ಗೋಪಾಲಪುರಂ ಮತ್ತು ಆಂಧ್ರಪ್ರದೇಶದ ಕಳಿಂಗಪಟ್ಟಣಂನಲ್ಲಿ ಚಂಡಮಾರುತದ ನೆಲಸ್ಪರ್ಶದ ನಂತರ ಎರಡೂ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ.
# ಎಲ್ಲೆಲ್ಲಿ ಮಳೆಯಾಗಿದೆ?
ಮಂಗಳೂರು, ಧರ್ಮಸ್ಥಳ, ಸುಬ್ರಹ್ಮಣ್ಯ, ತಿಡಗುಂಡಿ, ಶ್ರವಣಬೆಳಗೊಳ, ಕೆಜಿಎಫ್, ಬೀದರ್, ಕಾರ್ಕಳ, ಜಮಖಂಡಿ, ಮಳವಳ್ಳಿ, ಉಡುಪಿ, ಕೋಟಾ, ಮಾಣಿ, ಬಂಟ್ವಾಳ, ಬೀಳಗಿ, ಭೀಮರಾಯನಗುಡಿ, ಆಗುಂಬೆಯಲ್ಲಿ ಮಳೆಯಾಗಿದೆ.
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಅಲ್ಲಲ್ಲಿ ಮಳೆಯಾಗಲಿದೆ. 27 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಮುಂದಿನ 24 ಗಂಟೆಗಳಲ್ಲಿ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಕರಾವಳಿಯ ಹಲವು ಜಿಲ್ಲೆಗಳು, ದಕ್ಷಿಣ ಒಳನಾಡಿನ ಕೆಲವೆಡೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.