2023ರ ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸುತ್ತೇವೆ; ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ಮುಂದುವರೆಸಿದ HDK
ರಾಮನಗರ: ಮಾತನಾಡುವವರು ಮಾತನಾಡಲಿ, 2023ರ ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಹೇಳುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ರಾಮನಗರದ ಕೇತಗಾನಹಳ್ಳಿಯಲ್ಲಿ ನಡೆದ ಜೆಡಿಎಸ್ ಕಾರ್ಯಾಗಾರದಲ್ಲಿ ಮಾತನಾಡಿದ ಕುಮಾರಸ್ವಾಮಿ, ಜೆಡಿಎಸ್ ನಿಂದಲೇ ಬೆಳೆದು ಹೋದವರೊಬ್ಬರು ನಮ್ಮ ಪಕ್ಷದ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ನಾವೇನೆಂಬುದನ್ನು ತೋರಿಸುತ್ತೇವೆ ಎಂದು ತಿರುಗೇಟು ನೀಡಿದರು.
ಇಂದಿನಿಂದ ನಾಲ್ಕು ದಿನಗಳ ಕಾಲ ಜೆಡಿಎಸ್ ಕಾರ್ಯಾಗಾರ ನಡೆಯುತ್ತಿದೆ. ಅಭ್ಯರ್ಥಿಗಳು ಯಾವ ರೀತಿ ಜನರನ್ನು ತಲುಪಬೇಕು ಎಂಬ ಬಗ್ಗೆ ನಾಯಕತ್ವದ ಗುಣ, ಶಿಸ್ತು ಮೊದಲಾದವುಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಕಾರ್ಯಾಧ್ಯಕ್ಷತೆಯನ್ನು ಪಡೆದು ನಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು ಇಲ್ಲವಾದಲ್ಲಿ ಅಭ್ಯರ್ಥಿಗಳ ಬದಲಾವಣೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಕನ್ನಡಿಗರಿಗೋಸ್ಕರ ಇರುವ ಪಕ್ಷ ನಮ್ಮದು, ಜೆಡಿಎಸ್ ಕಾರ್ಯಕ್ರಮದಲ್ಲಿ ಸೇರುವ ದೊಡ್ಡ ಮಟ್ಟದ ಜನಸಂಖ್ಯೆ ಮತವಾಗಿ ಬದಲಾವಣೆಯಾಗಬೇಕು. ಸ್ವತಂತ್ರವಾಗಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬುದೇ ನಮ್ಮ ಗುರಿ ಎಂದು ಹೇಳಿದರು.