ಸ್ಟಾರ್ ಸಿನಿಮಾಗಳ ಅಬ್ಬರ ಶುರು: ಒಂದೇ ದಿನ ಎರಡು ಸ್ಟಾರ್ ಸಿನಿಮಾ; ‘ಸ್ಟಾರ್ವಾರ್ ಅಲ್ಲ ‘
ಚಿತ್ರಮಂದಿರಗಳ ಹೌಸ್ಫುಲ್ ಪ್ರದರ್ಶನಕ್ಕೆ ಅನುಮತಿ ಸಿಗುತ್ತಿದ್ದಂತೆ ಸ್ಟಾರ್ ಸಿನಿಮಾಗಳು ತಮ್ಮ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಮಾಡಿವೆ. ಮೊದಲ ಹಂತವಾಗಿ ಮೂರು ಸ್ಟಾರ್ ಸಿನಿಮಾಗಳಾದ “ಭಜರಂಗಿ-2′, “ಕೋಟಿಗೊಬ್ಬ-3′ ಹಾಗೂ “ಸಲಗ’ ಚಿತ್ರಗಳು ಬಿಡುಗಡೆಯ ದಿನಾಂಕವನ್ನು ಘೋಷಿಸಿಕೊಂಡಿವೆ.
ಶಿವರಾಜ್ ಕುಮಾರ್ ನಾಯಕರಾಗಿರುವ “ಭಜರಂಗಿ-2′ ಚಿತ್ರ ಅಕ್ಟೋಬರ್ 29ಕ್ಕೆ ತೆರೆಗೆ ಬಂದರೆ, ದುನಿಯಾ ವಿಜಯ್ ನಟನೆ, ನಿರ್ದೇಶನದ “ಸಲಗ’ ಚಿತ್ರ ಅಕ್ಟೋಬರ್ 14ರಂದು ತೆರೆಗೆ ಬರಲಿದೆ. ಸುದೀಪ್ ನಟನೆಯ “ಕೋಟಿಗೊಬ್ಬ-3′ ಚಿತ್ರ ಕೂಡಾ ಅಕ್ಟೋಬರ್ 14ರಂದೇ ತನ್ನ ಬಿಡುಗಡೆಯನ್ನು ಘೋಷಿಸಿ ಕೊಂಡಿದ್ದು, ಈ ಮೂಲಕ ಅಚ್ಚರಿಗೆ ಕಾರಣವಾಗಿದೆ. ಇದರೊಂದಿಗೆ ಎರಡನೇ ಇನ್ನಿಂಗ್ಸ್ನ ಆರಂಭದಲ್ಲೇ ಸ್ಟಾರ್ವಾರ್ ಆರಂಭವಾದಂತಾಗಿದೆ.
ಸ್ಟಾರ್ವಾರ್ಗೆ ಕಾರಣವಾಗುತ್ತಾ?: ಎರಡು ದೊಡ್ಡ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದರಿಂದ ಇದು ಸ್ಟಾರ್ವಾರ್ಗೆ ನಾಂದಿಯಾಗುತ್ತಾ ಎಂಬ ಚರ್ಚೆ ಶುರುವಾಗಿದೆ. ಆದರೆ, ಇದು ಸ್ಟಾರ್ವಾರ್ ಗಿಂತ ಅಭಿಮಾನಿಗಳ ನಡುವಿನ ಗೊಂದಲಕ್ಕೆ ಕಾರಣವಾಗೋದು ಸುಳ್ಳಲ್ಲ. ಆರಂಭದಲ್ಲಿ ಮೂವರು ನಿರ್ಮಾಪಕರು “ನಾವು ಜೊತೆಯಾಗಿ ಚರ್ಚಿಸಿ ಡೇಟ್ ಅನೌನ್ಸ್ ಮಾಡುತ್ತೇವೆ’ ಎಂದಿದ್ದರು. ಆದರೆ, ಈಗ ಅವರಲ್ಲೇ ಸಣ್ಣ ಅಸಮಾಧಾನ ಮೂಡಿರುವುದರಿಂದ ನಡೆಯಬೇಕಾಗಿದ್ದ ಸಭೆ ನಡೆದಿಲ್ಲ. ಚರ್ಚಿಸದೇ ಅವರವರೇ ಡೇಟ್ ಅನೌನ್ಸ್ ಮಾಡಿಕೊಂಡಿರುವ ಪರಿಣಾಮ ಈಗ ಸ್ಟಾರ್ವಾರ್ ಹಾಗೂ ಗೊಂದಲಕ್ಕೆ ಕಾರಣವಾಗಿದೆ. ಎರಡೂ ದೊಡ್ಡ ಸಿನಿಮಾಗಳು ಒಂದೇ ದಿನ ಬರುವುದರಿಂದ ಚಿತ್ರಮಂದಿರಗಳ ಹಂಚಿಕೆಯಲ್ಲಿ ಸಣ್ಣ ಸಮಸ್ಯೆಯಾಗಲಿದೆ. ಜೊತೆಗೆ ಪ್ರೇಕ್ಷಕರಿಗೂ ಮೊದಲಿಗೆ ಯಾವ ಸಿನಿಮಾ ನೋಡೋದು ಎಂಬ ಗೊಂದಲ ಕಾಡಲಿದೆ.
2022ರ ಪ್ರೇಮಿಗಳ ದಿನಕ್ಕೆ “ಲಾಲ್ ಸಿಂಗ್ ಛಡ್ಡಾ
ಅದರಾಚೆ ನೋಡೋದಾದರೆ ಕೊರೊನಾ ಎರಡನೇ ಅಲೆಯ ನಂತರ ಚಿತ್ರರಂಗ ಮತ್ತೆ ಅದ್ಧೂರಿಯಾಗಿ ತೆರೆದುಕೊಳ್ಳುತ್ತಿರುವುದಕ್ಕೆ ಇದು ಸಾಕ್ಷಿ. ಸದ್ಯ ಈ ಮೂರು ಚಿತ್ರಗಳು ಕೂಡಾ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಎರಡನೇ ಅಲೆ ಮುಂಚೆ ಈ ಮೂರು ಚಿತ್ರಗಳು ತಮ್ಮ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದವು. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ, ಈಗ ಈ ಮೂರು ಸಿನಿಮಾಗಳು ಅಕ್ಟೋಬರ್ನಲ್ಲಿ ಬಿಡುಗಡೆ ಯಾಗುತ್ತಿರುವುದರಿಂದ ಇಡೀ ಚಿತ್ರರಂಗದಲ್ಲಿ ಒಂದು ಉತ್ಸಾಹ ತುಂಬಿದೆ. ಅಭಿಮಾನಿಗಳು ಕೂಡಾ ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಎದುರು ನೋಡುತ್ತಿದ್ದಾರೆ.
ಭಜರಂಗಿ-2: ಶಿವರಾಜ್ಕುಮಾರ್ ಅವರ “ಭಜರಂಗಿ’ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈಗ ಅದರ ಮುಂದುವರೆದ ಭಾಗವಾಗಿ “ಭಜರಂಗಿ-2′ ಬರುತ್ತಿದೆ. ಎ.ಹರ್ಷ ಈ ಚಿತ್ರದ ನಿರ್ದೇಶಕ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್, ಹಾಡುಗಳು ಹಿಟ್ ಆಗುವ ಮೂಲಕ ಚಿತ್ರದ ನಿರೀಕ್ಷೆ ಕೂಡಾ ಹೆಚ್ಚಿದೆ. ಇನ್ನು, ಶಿವರಾಜ್ಕುಮಾರ್ ಅವರ ಗೆಟಪ್ ಕೂಡಾ ಈ ಚಿತ್ರದಲ್ಲಿ ವಿಭಿನ್ನವಾಗಿದೆ.
ಕೋಟಿಗೊಬ್ಬ-3: ಸದ್ಯ ಬಿಡುಗಡೆಗೆ ರೆಡಿಯಾಗಿರುವ ಮತ್ತೂಂದು ಸ್ಟಾರ್ ಸಿನಿಮಾ “ಕೋಟಿಗೊಬ್ಬ-3′. ಈಗಾಗಲೇ ಸುದೀಪ್ “ಕೋಟಿಗೊಬ್ಬ-2′ ಚಿತ್ರ ಮಾಡಿದ್ದು, ಅದರ ಮುಂದುವರೆದ ಭಾಗವಾಗಿ “ಕೋಟಿಗೊಬ್ಬ-3′ ಬರುತ್ತಿದೆ. ಈ ಚಿತ್ರವನ್ನು ಶಿವ ಕಾರ್ತಿಕ್ ನಿರ್ದೇಶಿಸಿದ್ದು, ಸೂರಪ್ಪ ಬಾಬು ನಿರ್ಮಿಸಿದ್ದಾರೆ. ಚಿತ್ರದ ಹಾಡು ಹಾಗೂ ಟೀಸರ್ ಹಿಟ್ ಆಗಿದ್ದು, ಕಿಚ್ಚನ ಅಭಿಮಾನಿಗಳ ಕಾತರ ಹೆಚ್ಚಾಗಿದೆ.
ಸಲಗ: ಪಕ್ಕಾ ಔಟ್ ಅಂಡ್ ಔಟ್ ಮಾಸ್ ಸಿನಿಮಾವಾಗಿ ಗಮನ ಸೆಳೆದಿರುವ ಮತ್ತೂಂದು ಸ್ಟಾರ್ ಸಿನಿಮಾ ಎಂದರೆ ಅದು “ಸಲಗ’. ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡಿ, ನಟಿಸುರುವ “ಸಲಗ’ ಚಿತ್ರ ಅಕ್ಟೋಬರ್ 14ಕ್ಕೆ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಮೇಲೆ ಕ್ರೇಜ್ ಸ್ವಲ್ಪ ಹೆಚ್ಚೇ ಇದೆ. ಅದಕ್ಕೆ ಕಾರಣ ಚಿತ್ರದ ಹಾಡುಗಳು ಹಿಟ್ ಆಗಿರೋದು. ಚಿತ್ರದ “ಸೂರಿಯಣ್ಣ….’ ಹಾಗೂ “ಟಿನಿಂಗ ಮಿನಿಂಗ ಟಿಶ್ಯಾ’ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗುವ ಮೂಲಕ ಸಿನಿಮಾದ ಬಗ್ಗೆ ಮಾಸ್ ಆಡಿಯನ್ಸ್ ಕಾತರದೊಂದಿಗೆ ಕಾಯುತ್ತಿದ್ದಾರೆ.