ಫೋಕ್ಸ್‌ವ್ಯಾಗನ್ ಟೈಗುನ್ ಭಾರತದ ಮಾರುಕಟ್ಟೆಗೆ ಬಿಡುಗಡೆ
ನವದೆಹಲಿ: ಜರ್ಮನಿ ಮೂಲದ ಫೋಕ್ಸ್ ವ್ಯಾಗನ್ ಕಾರು ಕಂಪನಿ, ಭಾರತದಲ್ಲಿ ತನ್ನ ಹೊಸ “ಟೈಗುನ್’ ಎಸ್‌ಯುವಿ ಕಾರನ್ನು ಬಿಡುಗಡೆಗೊಳಿಸಿದೆ. ಕಂಫರ್ಟ್ ಲೈನ್, ಹೈಲೈನ್ ಎಂಟಿ, ಹೈಲೈನ್ ಎಟಿ, ಟಾಪ್ ಲೈನ್ ಎಂಟಿ, ಟಾಪ್ ಲೈನ್ ಎಟಿ, ಪರ್ಫಾಮನ್ಸ್ ಜಿಟಿ, ಪರ್ಫಾಮನ್ಸ್ ಜಿಟಿ ಪ್ಲಸ್ ಎಂಬ ಮಾದರಿಗಳಲ್ಲಿ ಕಾರು ಲಭ್ಯವಿದೆ.
ಬೇಸಿಕ್ ಮಾಡೆಲ್ ಎನಿಸಿರುವ ಕಂಫರ್ಟ್ ಲೈನ್‌ನ ಎಕ್ಸ್ ಷೋ ರೂಂ ಬೆಲೆ 10.49 ಲಕ್ಷ ರೂ. ಆಗಿದ್ದರೆ, ಟಾಪ್ ಎಂಡ್ ಎನಿಸಿರುವ ಪರ್ಫಾಮನ್ಸ್ ಜಿಟಿ ಪ್ಲಸ್ ಕಾರಿನ ಬೆಲೆ 17.49 ಲಕ್ಷ ರೂ. ಇರುವುದಾಗಿ ಕಂಪನಿ ಪ್ರಕಟಿಸಿದೆ.
ಭೂಸೇನೆಗೆ 118 ಯುದ್ಧ ಟ್ಯಾಂಕ್ ಖರೀದಿ
ಭೂಸೇನೆಗೆ 7,523 ಕೋಟಿ ರೂ. ವೆಚ್ಚದಲ್ಲಿ 118 ಯುದ್ಧ ಟ್ಯಾಂಕ್‌ಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯ ಒಪ್ಪಿಗೆ ನೀಡಿದೆ. ಇದರಿಂದಾಗಿ ಭೂಸೇನೆಯ ಶಕ್ತಿ ಮತ್ತಷ್ಟು ವೃದ್ಧಿಯಾಗಲಿದೆ. ಚೆನ್ನೈನ ಆವಡಿಯಲ್ಲಿರುವ ಹೆವಿ ವೆಹಿಕಲ್ ಫ್ಯಾಕ್ಟರಿ (ಎಚ್ ವಿಎಫ್)ಯಲ್ಲಿ ಅರ್ಜುನ ಎಂಕೆ-1ಎ ಯುದ್ಧ ಟ್ಯಾಂಕ್ ಗಳನ್ನು ಉತ್ಪಾದಿಸಲಾಗುತ್ತದೆ.
ಹೊಸ ಮಾದರಿಯ ಟ್ಯಾಂಕ್, ಸದ್ಯ ಸೇನೆಯಲ್ಲಿ ಕಾರ್ಯವೆಸಗುತ್ತಿರುವ ಅರ್ಜುನ ಟ್ಯಾಂಕ್ ನ ಸುಧಾರಿತ ಆವೃತ್ತಿಯಾಗಿದೆ. ಅದರ ಗುಂಡು ಹಾರಿಸುವ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಜತೆಗೆ ಬಾಳಿ ಕೆ, ಚಲನಾ ಸಾಮರ್ಥ್ಯ ಸೇರಿದಂತೆ 72 ಹೊಸ ಅಂಶಗಳನ್ನು ಅದರಲ್ಲಿ ಸೇರ್ಪಡೆ ಮಾಡಲಾಗಿದೆ.
“ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಹೊಸ ಮಾದರಿಯ ಅರ್ಜುನ ಟ್ಯಾಂಕ್‌ಗಳನ್ನು ಉತ್ಪಾದಿಸಲು ನಿರ್ಧರಿಸಲಾಗಿದೆ. ಈ ಮೂಲಕ ಆತ್ಮನಿರ್ಭರ ಭಾರತ ಕಲ್ಪನೆ ಸಾಕಾರಗೊಳಿಸುವತ್ತ ಹೆಜ್ಜೆ ಇರಿಸಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ಹೇಳಿದೆ.