ಗಂಡು ಮಗುವಿಗೆ ಜನ್ಮ ನೀಡಿದ ನಿಖಿಲ್ ಕುಮಾರ್ ಪತ್ನಿ ರೇವತಿ
ಕನ್ನಡದ ಯುವ ನಟ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಶುಕ್ರವಾರ (ಸೆಪ್ಟೆಂಬರ್ 24) ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.
ಖಾಸಗಿ ಆಸ್ಪತ್ರೆಯಲ್ಲಿ ರೇವತಿ ನಿಖಿಲ್ ಕುಮಾರ್ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಕುಟುಂಬಸ್ಥರಿಂದ ಮಾಹಿತಿ ಲಭ್ಯವಾಗಿದೆ. ಮಗ ನಿಖಿಲ್ ಕುಮಾರ್ ದಂಪತಿಗೆ ಗಂಡು ಮಗು ಆಗಿರುವ ಹಿನ್ನೆಲೆ ಮಾಜಿ ಸಿಎಂ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿ ತಾಯಿ, ಮಗುವಿನ ಆರೋಗ್ಯ ವಿಚಾರಿಸಲಿದ್ದಾರೆ.
ಎರಡು ವಾರಗಳ ಹಿಂದೆಯಷ್ಟೇ ರೇವತಿ ನಿಖಿಲ್ ಕುಮಾರ್ ಅವರ ಸೀಮಂತ ಕಾರ್ಯಕ್ರಮ ನಡೆದಿತ್ತು. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಮಾನ್ವಿ ಕನ್ವೆಂಷನ್ ಸೆಂಟರ್‌ನಲ್ಲಿ ಎಚ್‌ಡಿ ಕುಮಾರಸ್ವಾಮಿ ಸೊಸೆಯ ಸೀಮಂತ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಕುಟುಂಬ ಸಂಬಂಧಿಕರು, ಆಪ್ತರು ಮತ್ತು ಗೆಳಯರಷ್ಟೇ ಭಾಗಿಯಾಗಿದ್ದರು.
ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಕಳೆದ ವರ್ಷ (17 ಏಪ್ರಿಲ್ 2020) ಕೊರೊನಾ ಭೀತಿಯ ನಡುವೆ ವಿವಾಹವಾಗಿದ್ದರು. ಬಿಡದಿ ಬಳಿಯ ಫಾರ್ಮ್ ಹೌಸ್‌ನಲ್ಲಿ ಆಪ್ತ ಕುಟುಂಬ ವರ್ಗದ ಸಮ್ಮುಖದಲ್ಲಿ ನಿಖಿಲ್-ರೇವತಿಯ ಮದುವೆ ನಡೆದಿತು.
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡ ನಂತರ ನಿಖಿಲ್ ಕುಮಾರ್ ಅವರಿಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಪಟ್ಟ ನೀಡಲಾಯಿತು. ರಾಜಕೀಯ ಮತ್ತು ಸಿನಿಮಾ ಎರಡರಲ್ಲೂ ನಿಖಿಲ್ ಸಕ್ರಿಯರಾಗಿದ್ದು, ರಾಜಕೀಯದ ನಡುವೆ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದಾರೆ.
‘ಸೀತಾರಾಮ ಕಲ್ಯಾಣ’ ಚಿತ್ರದ ನಂತರ ನಿಖಿಲ್ ಕುಮಾರ್ ನಟನೆಯ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ವಿಜಯ್ ಕುಮಾರ್ ಕೊಂಡ ನಿರ್ದೇಶನದಲ್ಲಿ ಮಾಡಿರುವ ‘ರೈಡರ್’ ಸಿನಿಮಾ ಚಿತ್ರೀಕರಣ ಮುಗಿಸಿದ ತೆರೆಗೆ ಬರಲು ಸಜ್ಜಾಗಿದೆ. ಕೋವಿಡ್ ಕಾರಣದಿಂದ ಪೋಸ್ಟ್ ಪ್ರೊಡಕ್ಷನ್‌ಗೆ ಬ್ರೇಕ್ ಹಾಕಲಾಗಿತ್ತು. ಈಗ ಡಬ್ಬಿಂಗ್ ಕೆಲಸವೂ ಮುಗಿದಿದ್ದು, ಶೀಘ್ರದಲ್ಲೇ ತೆರೆಗೆ ಬರುವ ಹಾದಿಯಲ್ಲಿದೆ.
ರೈಡರ್ ಸಿನಿಮಾ ಆಕ್ಷನ್ ಎಂಟರ್‌ಟೈನ್‌ಮೆಂಟ್ ಆಗಿದ್ದು, ಇದರಲ್ಲಿ ನಿಖಿಲ್ ಕುಮಾರ್ ಕ್ರೀಡಾಪಟು ಆಗಿ ನಟಿಸಿದ್ದಾರೆ. ‘ಒಕಾ ಲೈಲಾ ಕೋಸಮ್’, ‘ಗುಂಡೆ ಜಾರಿ ಗಲ್ಲಂತಯ್ಯಂದಿ’ ಸಿನಿಮಾ ನಿರ್ದೇಶಿಸಿದ್ದ ವಿಜಯ್ ಕುಮಾರ್ ಕೊಂಡ ಈ ಚಿತ್ರ ನಿರ್ದೇಶಿಸಿದ್ದಾರೆ. ಕಾಶ್ಮೀರ ಪರದೇಶಿ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದು ಇವರಿಗೆ ಮೊದಲ ಕನ್ನಡ ಸಿನಿಮಾ. ಸಂಪದ ಎರಡನೇ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ದತ್ತಣ್ಣ, ಚಿಕ್ಕಣ್ಣ, ಶಿವರಾಕ್ ಕೆ ಆರ್ ಪೇಟೆ, ರಾಜೇಶ್ ನಟರಂಗ, ಶೋಭರಾಜ್, ನಿಹಾರಿಕ ಮತ್ತು ಅನುಶಾ ಪಾತ್ರವರ್ಗದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ಮತ್ತು ಶ್ರೀರು ಕುದುವಳ್ಳಿ ಛಾಯಾಗ್ರಾಹಣವಿದೆ.
ರೈಡರ್ ತೆರೆಗೆ ಬರುವುದಕ್ಕೆ ಮುಂಚೆಯೇ ಮಂಜು ಅಥರ್ವ ಜೊತೆ ಹೊಸ ಚಿತ್ರಕ್ಕೆ ನಿಖಿಲ್ ಕುಮಾರ್ ಚಾಲನೆ ನೀಡಿದ್ದಾರೆ. ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದ್ದು, ಟೈಟಲ್ ಅಂತಿಮವಾಗಿಲ್ಲ. ಅಜನೀಶ್ ಲೋಕನಾಥ್ ಸಂಗೀತವಿದೆ. ನಟ ಶಿವರಾಜ್ ಕುಮಾರ್ ನಟನೆಯ ಹೊಸ ಸಿನಿಮಾದಲ್ಲಿ ನಿಖಿಲ್ ನಟಿಸಲಿದ್ದಾರೆ. ಈ ಸಿನಿಮಾವನ್ನು ನಂದ ಕಿಶೋರ್ ನಿರ್ದೇಶನ ಮಾಡಲಿದ್ದಾರೆ.