ಬೆಂಗಳೂರಲ್ಲಿ ಸಿಲಿಂಡರ್ ಸ್ಫೋಟ, 3 ಸಾವು
ಬೆಂಗಳೂರು, ಸೆಪ್ಟೆಂಬರ್ 23; ಬೆಂಗಳೂರಿನ ದೇವರಚಿಕ್ಕನಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ಬೆಂಕಿ ದುರಂತ ಸಂಭವಿಸಿದ ನೆನಪು ಇರುವಾಗಲೇ ನಗರದಲ್ಲಿ ಮತ್ತೊಂದು ದುರಂತ ನಡೆದಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಗುರುವಾರ ಚಾಮರಾಜಪೇಟೆಯ ರಾಯನ್ ಸರ್ಕಲ್ ಬಳಿಯ ನ್ಯೂ ತರಗುಪೇಟೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮೂವರ ದೇಹಗಳು ಛಿದ್ರವಾಗಿವೆ. ಇಬ್ಬರು ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಅಗ್ನಿ ಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಮೊದಲು ಇದೊಂದು ನಿಗೂಢ ಸ್ಫೋಟ ಎಂಬ ಸುದ್ದಿ ಹಬ್ಬಿತ್ತು. ಬಳಿಕ ಸಿಲಿಂಡರ್ ಸ್ಫೋಟ ಎಂಬುದು ತಿಳಿದಿದೆ.
ಗುರುವಾರ ಮಧ್ಯಾಹ್ನ 12.05ರ ಸುಮಾರಿಗೆ ರಾಯನ್ ಸರ್ಕಲ್ ಬಳಿಯ ಕಟ್ಟಡದಲ್ಲಿ ಸಿಲಿಂಡರ್ ಸ್ಫೋಟವಾಗಿದೆ. ಗೋದಾಮಿನಿಂದ ದೇಹಗಳು ಛಿದ್ರಗೊಂಡು ಮೇಲೆ ಹಾರಿದ್ದು ರಸ್ತೆಯಲ್ಲಿದ್ದ ಜನರು ಗಾಬರಿಯಿಂದ ಓಡಿದರು.
ಸ್ಫೋಟದ ತೀವ್ರತೆಗೆ ಮೂವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಸಿಲಿಂಡರ್ ಸ್ಫೋಟದ ತೀವ್ರತೆಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಅಕ್ಕಪಕ್ಕದ ಮನೆ, ಕಟ್ಟಡದ ಗಾಜುಗಳು ಸಹ ಒಡೆದು ಹೋಗಿವೆ. 10ಕ್ಕೂ ಹೆಚ್ಚು ಬೈಕ್‌ಗಳಿಗೆ ಬೆಂಕಿ ತಗುಲಿದೆ.
ಪಂಕ್ಚರ್ ಶಾಪ್‌ನಲ್ಲಿ ಸ್ಫೋಟ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶಾಪ್ ಮಾಲೀಕ ಅಸ್ಲಮ್, ತಮಿಳುನಾಡು ಮೂಲದ ಮನೋಹರ್, ಸ್ಥಳದಲ್ಲಿ ಟೀ ಕುಡಿಯುತ್ತಿದ್ದ ಫಯಾಜ್ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಸ್ಥಳಕ್ಕೆ ಧಾವಿಸಿದ್ದಾರೆ. “ಗೋದಾಮಿನಲ್ಲಿದ್ದ ಇಬ್ಬರು, ಪಂಕ್ಚರ್ ಶಾಪ್‌ನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಸ್ಫೋಟಕ್ಕೆ ಕಾರಣವೇನು? ಎಂದು ತನಿಖೆ ನಡೆಸುತ್ತಿದ್ದೇವೆ” ಎಂದು ಹೇಳಿದರು.
ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳಕ್ಕೆ ಆಗಮಿಸಿದ್ದಾರೆ. ಸ್ಪೋಟಕ್ಕೆ ಕಾರಣವೇನು? ಎಂದು ಅವರು ಸಹ ತನಿಖೆ ನಡೆಸಲಿದ್ದಾರೆ. ಗೋದಾಮಿನಲ್ಲಿ 15 ಬಾಕ್ಸ್ ಪಟಾಕಿ ಇತ್ತು ಎಂಬ ಮಾಹಿತಿ ಇದೆ. ಇದರಲ್ಲಿ 2 ಬಾಕ್ಸ್ ಮಾತ್ರ ಸ್ಫೋಟವಾಗಿವೆ.