ನಾಸ್ಡಾಕ್ ಪಟ್ಟಿಗೆ ಸೇರಿದ ಮೊದಲ ಭಾರತೀಯ ಸ್ಟಾರ್ಟ್ ಅಪ್ ಚೆನ್ನೈ ನ ಫ್ರೆಶ್ ವರ್ಕ್ಸ್!
ಬೆಂಗಳೂರು: ಚೆನ್ನೈ ನ ಫ್ರೆಶ್ ವರ್ಕ್ ಎಂಬ ಸಾಫ್ಟ್ ವೇರ್ ಸೇವೆಗಳ ಸಂಸ್ಥೆ ನಾಸ್ಡಾಕ್ ಪಟ್ಟಿಗೆ ಸೇರಿದ ಭಾರತೀಯ ಮೂಲದ ಸ್ಟಾರ್ಟ್ ಅಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಂದಾಜು 10.13 ಬಿಲಿಯನ್ ಡಾಲರ್ ಮೌಲ್ಯವನ್ನು ಈ ಸಂಸ್ಥೆ ಹೊಂದಿದ್ದು, ಸಾಂಕ್ರಾಮಿಕದ ನಂತರ ಪುಟಿದೆದ್ದ ಸಾಫ್ಟ್ ವೇರ್ ಉದ್ಯಮದಲ್ಲಿ ಮುಂಚೂಣಿಯಲ್ಲಿದೆ.
ಚೆನ್ನೈ ನಲ್ಲಿ 700 ಚದರ ಅಡಿ ವೇರ್ ಹೌಸ್ ನಲ್ಲಿ ಪ್ರಾರಂಭವಾದ ಫ್ರೆಶ್ ವರ್ಕ್, ಪ್ರಾರಂಭವಾದ ಕೆಲವು ವರ್ಷಗಳ ನಂತರ ಕ್ಯಾಲಿಫೋರ್ನಿಯಾಗೆ ವರ್ಗಾವಣೆಯಾಗಿ ಜಾಗತಿಕ ಮಟ್ಟದಲ್ಲಿ ಹೂಡಿಕೆ, ಗ್ರಾಹಕರನ್ನು ಪಡೆಯಲು ಪ್ರಾರಂಭಿಸಿತು. ಈಗ ಸೆ.22 ರಂದು ಫ್ರೆಶ್ ವರ್ಕ್ಸ್ ಸಂಸ್ಥೆ ತನ್ನ ಇತ್ತೀಚಿನ ಅಂದಾಜು ಮೊತ್ತ 912 ಮಿಲಿಯನ್ ಡಾಲರ್ ಗಳಿಗಿಂತ ಸ್ವಲ್ಪ ಹೆಚ್ಚಿನ ಮೊತ್ತ ಅಂದರೆ 1.03 ಬಿಲಿಯನ್ ಡಾಲರ್ ಮೊತ್ತವನ್ನು ಸಂಗ್ರಹಿಸುವುದಾಗಿ ಹೇಳಿಕೊಂಡಿದೆ. ಇದಕ್ಕಾಗಿ 28.5 ಮಿಲಿಯನ್ ಷೇರುಗಳನ್ನು ಪ್ರತಿ ಷೇರುಗಳಿಗೆ 36 ಡಾಲರ್ ಮೊತ್ತಕ್ಕೆ ಮಾರಾಟ ಮಾಡುವುದಾಗಿ ಹೇಳಿದೆ. ಕಳೆದ ಹಣಕಾಸು ವರ್ಷಕ್ಕಿಂತ ಈ ವರ್ಷದಲ್ಲಿ ಫ್ರೆಶ್ ವರ್ಕ್ಸ್ ನ ಮೌಲ್ಯ 3 ಪಟ್ಟು ಹೆಚ್ಚಳಗೊಂಡಿದೆ.
“ತಿರುಚ್ಚಿಯಿಂದ ನಾಸ್ಡಾಕ್ ವರೆಗೆ ಇಂದು ನನ್ನ ಕನಸು ನನಸಾದ ದಿನ, ಈ ಕನಸನ್ನು ನಂಬಿದ್ದ ಫ್ರೆಶ್ ವರ್ಕ್ಸ್ ಐಪಿಒ ನ ಉದ್ಯೋಗಿಗಳು, ಗ್ರಾಹಕರು, ಪಾಲುದಾರರು, ಹೂಡಿಕೆದಾರರಿಗೆ ಧನ್ಯವಾದಗಳು ಎಂದು” ಫ್ರೆಶ್ ವರ್ಕ್ಸ್ ನ ಸಿಇಒ, ಸಂಸ್ಥಾಪಕ ಗಿರೀಶ್ ಮಾತೃಬೂತಮ್ ಹೇಳಿದ್ದಾರೆ.