ವಿಧಾನಸಭೆಯಲ್ಲಿ ಮಾರ್ಧನಿಸಿದ ಮೈಸೂರು ಗ್ಯಾಂಗ್ ರೇಪ್ ಪ್ರಕರಣ: ಸರ್ಕಾರವಾಗಲೀ, ಪೊಲೀಸರಾಗಲಿ ಗಂಭೀರವಾಗಿ ಪರಿಗಣಿಸಿಯೇ ಇಲ್ಲ ಎಂದ ಸಿದ್ದರಾಮಯ್ಯ
ಬೆಂಗಳೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣವನ್ನು ರಾಜ್ಯ ಸರ್ಕಾರವಾಗಲೀ, ಪೊಲೀಸರಾಗಲಿ ಗಂಭೀರವಾಗಿ ಪರಿಗಣಿಸಿಯೇ ಇಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಹೌದು.. ಮೈಸೂರು ಅತ್ಯಾಚಾರ ಪ್ರಕರಣದಲ್ಲಿ ಮೈಸೂರು ಪೊಲೀಸರು ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ನಿರಂತರವಾಗಿ ಆ ಭಾಗದಲ್ಲಿ ಅಪರಾಧ ಪ್ರಕರಣಗಳು ನಡೆಯುತ್ತಿರುವ ಸಂದರ್ಭದಲ್ಲಿ ಪೊಲೀಸರು ನಿದ್ದೆ ಮಾಡ್ತಿದ್ರಾ? ಎಂದು ಪ್ರಶ್ನಿಸಿದರು.
ಈ ಕುರಿತು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರ ಮತ್ತು ಮೈಸೂರು ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅತ್ಯಾಚಾರ ಪ್ರಕರದ ವಿಚಾರವಾಗಿ ಮೈಸೂರು ಪೊಲೀಸರ ಕಾರ್ಯಕ್ಷಮತೆ ಹಾಗೂ ಗೃಹ ಸಚಿವರ ಕಾರ್ಯದ ಆರಗ ಜ್ಞಾನೇಂದ್ರ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಪೊಲೀಸರಿಗೆ ಅತ್ಯಾಚಾರ ಘಟನೆ ನಡೆದ ಜಾಗ ಯಾವುದು ಎಂದು ಗೊತ್ತಿಲ್ಲ ಎನ್ನುತ್ತಾರೆ. ಇಂತಹ ಪ್ರದೇಶದಲ್ಲಿ ಬೀಟ್ ಮಾಡದಿದ್ದರೆ ಹೇಗೆ? ಆ ಜಾಗ ಯಾರದು ಎಂಬುದು ಯಾರಿಗೂ ಗೊತ್ತಿಲ್ಲ. ಹಾಗಾದರೆ ಇವರು ಎಂತಹ ಕೆಲಸ ಮಾಡುತ್ತಾರೆ. ಅಪರಾಧಿಗಳಿಗೆ ಎಂತಹ ಶಿಕ್ಷೆ ಕೊಡಿಸುತ್ತಾರೆ ಎಂದು ನಿರೀಕ್ಷೆ ಮಾಡಬಹುದು ಎಂದು ಪ್ರಶ್ನಿಸಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಡಾ.ಸುಧಾಕರ್, ಸಾಮೂಹಿಕ ಅತ್ಯಾಚಾರ ನಡೆದಾಗ ಆಕೆಯ ಮಾನಸಿಕ ಸ್ಥಿತಿ ಹೇಗಿರಬಹುದು ಎಂಬುವುದು ಮುಖ್ಯ. ಆ ಸ್ಥಿತಿಯಲ್ಲಿ ಆಕೆ ಪೊಲೀಸರಿಗೆ ಹೇಳಿಕೆ ನೀಡಲು ಸಾಧ್ಯವೇ? ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಹಾಗಾದರೆ ಶಾಕಿಂಗ್ ನಲ್ಲೇ ಇದ್ದಾಗ ಯುವತಿಯನ್ನು ಡಿಸ್ಚಾರ್ಜ್ ಮಾಡಿದ್ರಾ? ಇವಾಗಲಾದರೂ ಹೇಳಿಕೆ ಪಡೆದುಕೊಳ್ಳಬಹುದಲ್ವಾ? ಎಂದರು.
ಮೈಸೂರಿನಲ್ಲಿ ಅತ್ಯಾಚಾರ ನಡೆದ ಸ್ಥಳಕ್ಕೆ ಪ್ರಕರಣದ ದೃಷ್ಟಿಯಿಂದ ಹೋಗುವುದು ಬೇಡ ಎಂಬ ಸಲಹೆಯನ್ನು ಕೆಲವು ಹಿರಿಯ ವಕೀಲರು ಹೇಳಿದ್ದರು ಎಂದು ಆರಗ ಜ್ಞಾನೇಂದ್ರ ಹೇಳಿಕೆಗೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರು. ಯಾವ ಲಾಯರ್ ನಿಮಗೆ ಸಲಹೆ ಕೊಟ್ಟರು? ಗೃಹ ಸಚಿವರಲ್ಲದೆ ಮತ್ತೆ ಯಾರು ಹೋಗಬೇಕು? ಅವರು ಲಾಯರ್ ಅಲ್ಲ ಎಲ್ ಎಲ್ ಬಿ ಡಿಗ್ರಿ ಪಡೆದುಕೊಂಡಿರಬೇಕು ಎಂದರು.
ಇನ್ನು ಪ್ರಕರಣದ ನಿರ್ವಹಣೆ ಕುರಿತಾಗಿ ಮೈಸೂರು ಪೊಲೀಸರ ನಡೆಯನ್ನು ಖಂಡಿಸಿದ ಸಿದ್ದರಾಮಯ್ಯ, ಸಂತ್ರಸ್ತೆ ಯವಕ- ಯುವತಿ ಮುಂದೆ ಆರೋಪಿಗಳ ಪರೇಡ್ ಆಗಿದ್ಯಾ? ಎಂದು ಪ್ರಶ್ನಿಸಿದರು. ಮೈಸೂರಿನಲ್ಲಿ ಪೊಲೀಸರು ಏನು ಮಾಡುತ್ತಿದ್ದಾರೆ? ಬೀಟ್ ಮಾಡಲು ಹೋಗಲ್ಲ ಅವರು. ಇಷ್ಟೇಲ್ಲ ಅಪರಾಧಗಳು ಆಗುತ್ತಿರುವಾಗ ಪೊಲೀಸರು ಏನು ನಿದ್ದೆ ಮಾಡುತ್ತಿದ್ರಾ? ಪೊಲೀಸರು ಲಿಕ್ಕರ್ ಶಾಪ್ ಗಳಲ್ಲಿ ಹಣ ವಸೂಲಿ ಮಾಡುತ್ತಾರೆ ಎಂದು ಆರೋಪ ಮಾಡಿದರು.
ಇದೇ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ಏಳು ಗಂಟೆಗೆ ಯುವತಿ ಹೊರಗಡೆ ಹೋಗಬಾರದಾ? ಹೋಂ ಮಿನಿಸ್ಟರ್ ಆಗಿ ಹೀಗೆ ಹೇಳಿದರೆ ಹೇಗೆ? ಎಂದು ಪ್ರಶ್ನಿಸಿದರು. ಅಲ್ಲದೆ ಘಟನೆ ನಡೆದ ಬಳಿಕ ನೇರವಾಗಿ ಘಟನಾ ಪ್ರದೇಶಕ್ಕೆ ತೆರಳದ ಗೃಹ ಸಚಿವರು ಇತರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕೊನೆಯಲ್ಲಿ ಘಟನಾ ಸ್ಥಳಕ್ಕೆ ತೆರಳಿದ್ದು ಏಕೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರ ನೀಡಿದ ಗೃಹ ಸಚಿವರು, ಈ ರೀತಿಯ ಮೃಗೀಯ ಮನಸ್ಸಿನ ವ್ಯಕ್ತಿಗಳು ಇದ್ದಾಗ ಗಾಂಧಿ ಹೇಳಿದಂತೆ 12 ಗಂಟೆಗೆ ಯುವತಿಯರು ಹೊರಗಡೆ ಹೋಗುವ ಪರಿಸ್ಥಿತಿ ಇದ್ಯಾ? ಎಂದರು. ಅಂತೆಯೇ ತಮ್ಮ ಕಾರ್ಯ ನಿರ್ವಹಣೆ ಕುರಿತು ಸಿದ್ದರಾಮಯ್ಯ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಇಲಾಖೆಯ ಪೂರ್ವ ನಿರ್ಧರಿತ ಪಟ್ಟಿಯಂತೆಯೇ ತಾವು ಅಂದು ಮೈಸೂರಿನಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೆ. ಪೊಲೀಸರನ್ನು ಯಾವಾಗಲೂ ಬೆನ್ನಿಗೆ ಕಟ್ಟಿಕೊಂಡು ತಿರುಗಲು ಸಾಧ್ಯವೇ… ಅವರ ಕೆಲಸ ಅವರು ಮಾಡಬಾರದೇ ಎಂದು ಪ್ರಶ್ನಿಸಿದರು. ಅಲ್ಲದೆ ಪೊಲೀಸ್ ಇಲಾಖೆಯಲ್ಲಿ ಪೂರ್ವ ನಿಗದಿಯಾಗಿದ್ದ ಕಾರ್ಯಕ್ರಮ ಇತ್ತು. ಆ ಕಾರಣಕ್ಕಾಗಿ ಭಾಗಿಯಾದೆ. ಪಿಸ್ತೂಲ್ ಕೊಟ್ಟು ಫೈರ್ ಮಾಡಿ ಎಂದು ಪೊಲೀಸರು ಕೊಟ್ಟರು. ಆ ಕಾರಣಕ್ಕಾಗಿ ಫೈರ್ ಮಾಡಿದೆ. ಯಾವುದೇ ಫೋಸ್ ಕೊಡುವ ಉದ್ದೇಶ ಇರಲಿಲ್ಲ ಎಂದು ಸಮರ್ಥನೆ ಮಾಡಿಕೊಂಡರು.
ಸರ್ಕಾರದ ಬೇಜವಾಬ್ದಾರಿತನ
ಇದೇ ವೇಳೆ ಸರ್ಕಾರ ಬೇಜವಾಬ್ದಾರಿ ಪ್ರದರ್ಶನ ಮಾಡಿದೆ ಎಂದು ಹೇಳಿದ ಸಿದ್ದರಾಮಯ್ಯ, ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು. ಘಟನೆ ಬೆಳಕಿಗೆ ಬಂದ ಬಳಿಕ ಹೋಮ್ ಮಿನಿಸ್ಟರ್ ಮೈಸೂರಿಗೆ ಬಂದು ಆರಾಮಾಗಿ ಚಾಮುಂಡಿ ಬೆಟ್ಟಕ್ಕೆ ಹೋಗಿ, ಎಲ್ಲಾ ಕಡೆ ಹೋಗಿ ಆ ನಂತರ ಸ್ಥಳಕ್ಕೆ ಹೊಗ್ತಾರೆ. ಎಷ್ಟು ಸೀರಿಯಸ್ ಇದಾರೆ ನೋಡಿ. ಚೈಲ್ಡಿಸ್ಟ್ ಮತ್ತು ಬೇಜವಾಬ್ದಾರಿ ಹೇಳಿಕೆ ಕೊಡ್ತಾರೆ. ಇಷ್ಡೊತ್ತಲ್ಲಿ ಯಾಕೆ ಬರಬೇಕಿತ್ತು ಅಂತ ಹೇಳ್ತಾರೆ. ಪೊಲೀಸರು ಉದ್ದೇಶ ಪೂರ್ವಕವಾಗಿ ಸಂತ್ರಸ್ತೆ ಹೇಳಿಕೆ ಪಡೆದಿಲ್ಲ ಎಂದೆನಿಸುತ್ತಿದೆ. ಪೊಲೀಸರಿಗೆ ತನಿಖೆಯ ಸ್ವಾತಂತ್ರ್ಯ ಇಲ್ಲ. ಈ ಎಲ್ಲ ನಡೆಗಳನ್ನು ಗಮನಿಸಿದರೆ ರಾಜ್ಯ ಸರ್ಕಾರ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ಕಿಡಿಕಾರಿದರು.