ದ್ವಿತೀಯ ಪಿಯುಸಿ: ಫಲಿತಾಂಶ ತಿರಸ್ಕರಿಸಿ ಪರೀಕ್ಷೆ ಬರೆದ 36 ವಿದ್ಯಾರ್ಥಿಗಳು ಫೇಲ್
ಬೆಂಗಳೂರು: ಕೋವಿಡ್ ಕಾರಣಕ್ಕೆ ದ್ವಿತೀಯ ಪಿಯುಸಿಯಲ್ಲಿ ಪರೀಕ್ಷೆ ನಡೆಸದೆ ನೀಡಿದ್ದ ಫಲಿತಾಂಶದಲ್ಲಿ ಉತ್ತೀರ್ಣರಾಗಿದ್ದ ವಿದ್ಯಾರ್ಥಿಗಳ ಪೈಕಿ, ಈ ಫಲಿತಾಂಶ ತಿರಸ್ಕರಿಸಿ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಪರೀಕ್ಷೆ ಬರೆದ 36 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
ಈ ಅನುತ್ತೀರ್ಣ ವಿದ್ಯಾರ್ಥಿಗಳ ಪೋಷಕರು ಇದೀಗ ತಮ್ಮ ಮಕ್ಕಳ ಹಳೆ ಫಲಿತಾಂಶವನ್ನೇ ನೀಡುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಗೆ ಬೇಡಿಕೆ ಇಟ್ಟಿದ್ದಾರೆ. ಆದರೆ, ತಿರಸ್ಕರಿಸಿದ ಫಲಿತಾಂಶವನ್ನು ಮತ್ತೆ ನೀಡಲು ಅವಕಾಶ ಇಲ್ಲ ಸ್ಪಷ್ಟಪಡಿಸಿರುವ ಇಲಾಖೆ, ಪೋಷಕರ ಬೇಡಿಕೆಯನ್ನು ತಿರಸ್ಕರಿಸಿದೆ.
ಹೆಚ್ಚಿನ ಅಂಕ ಗಳಿಸುವ ಆಸೆಯಿಂದ ‘ಅದೃಷ್ಟ’ ಪರೀಕ್ಷೆಗೆ ಮುಂದಾಗಿ ನೋಂದಾಯಿಸಿದ್ದ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪರೀಕ್ಷೆಗೆ ಹಾಜರಾಗುವ ಮೊದಲು ಇಲಾಖೆಯನ್ನು ಸಂಪರ್ಕಿಸಿ ತಮ್ಮ ಹಳೆ ಫಲಿತಾಂಶವನ್ನೇ ಉಳಿಸಿಕೊಳ್ಳುವಂತೆ ಮನವಿ ಮಾಡಿದ್ದರು ಎಂದೂ ಗೊತ್ತಾಗಿದೆ. 592 ವಿದ್ಯಾರ್ಥಿಗಳು ಫಲಿತಾಂಶ ತಿರಸ್ಕರಿಸಿ ಹೊಸ ಅಭ್ಯರ್ಥಿಗಳಾಗಿ ಪರೀಕ್ಷೆಗೆ ಹಾಜರಾಗಿದ್ದರು.
‘ಕೋವಿಡ್ ಕಾರಣದಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ನಡೆಸಲು ಸಾಧ್ಯ ಆಗಿಲ್ಲ. ಹೀಗಾಗಿ, ಎಸ್ಸೆಸ್ಸೆಲ್ಸಿ, ಪ್ರಥಮ ಪಿಯುಸಿ ಮತ್ತು ಶೈಕ್ಷಣಿಕ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳ ಆಧಾರದಲ್ಲಿ ಫಲಿತಾಂಶ ನೀಡಲಾಗಿತ್ತು. ಈ ಫಲಿತಾಂಶದಿಂದ ತೃಪ್ತಿ ಇಲ್ಲದವರು ತಿರಸ್ಕರಿಸಿ, ಹೊಸ ವಿದ್ಯಾರ್ಥಿಗಳಾಗಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಫಲಿತಾಂಶ ತಿರಸ್ಕರಿಸಿದ ಬಳಿಕ ಹೊಸತಾಗಿ ಪರೀಕ್ಷೆ ಬರೆಯಬೇಕು. ಹಿಂದಿನ ಫಲಿತಾಂಶ ಉಳಿಸಿಕೊಳ್ಳಲು ಅವಕಾಶ ಇಲ್ಲ ಎಂದು ಅಧಿಸೂಚನೆಯಲ್ಲೇ ತಿಳಿಸಲಾಗಿತ್ತು’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
‘ಪೋಷಕರ ಒತ್ತಡದ ಕಾರಣಕ್ಕೆ ಕೆಲವು ವಿದ್ಯಾರ್ಥಿಗಳು ಫಲಿತಾಂಶವನ್ನು ತಿರಸ್ಕರಿಸಿದ್ದರು. ಈಗ ಮಕ್ಕಳ-ಪೋಷಕರು ಕಚೇರಿಗೆ ಬಂದು ಹಿಂದಿನ ಫಲಿತಾಂಶವನ್ನೇ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಇದು ಅಸಾಧ್ಯ’ ಎಂದರು.
ಇಲಾಖೆಯಿಂದ ಲಭ್ಯ ಮಾಹಿತಿಯ ಪ್ರಕಾರ, ‘ಈ ಹಿಂದಿನ ಫಲಿತಾಂಶದಲ್ಲಿ 500ಕ್ಕೂ ಹೆಚ್ಚು ಅಂಕ ಪಡೆದ ಕೆಲವು ವಿದ್ಯಾರ್ಥಿಗಳ ಅಂಕ ಆಗಸ್ಟ್-ಸೆಪ್ಟೆಂಬರ್‌ನ ಪರೀಕ್ಷೆಯಲ್ಲಿ ‘ಶೂನ್ಯ’ ಎಂದು ನಮೂದಾಗಿದೆ. ಈ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿರುವ ಸಾಧ್ಯತೆ ಇದೆ. ಅಂಥ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷವೊಂದು ನಷ್ಟ ಆದಂತಾಗಿದೆ. ಅವರು ಮಾರ್ಚ್-ಏಪ್ರಿಲ್ 2022ರಲ್ಲಿ ನಡೆಯುವ ಪರೀಕ್ಷೆ ಬರೆಯಬೇಕಾಗಿದೆ.