ಕ್ರೈಂ

ವಿಜಯಪುರದಲ್ಲಿ ಮಾರಾಟವಾಗಿದ್ದ ಶಿಶು ಹುಬ್ಬಳ್ಳಿಯಲ್ಲಿ ಪತ್ತೆ ; ಪ್ರಕರಣ ಸುಖಾಂತ್ಯ

ವಿಜಯಪುರ: ಮಾರಾಟವಾಗಿದ್ದ ಶಿಶು ಕೊನೆಗೂ ಪೊಲೀಸರ ಪರಿಶ್ರಮದಿಂದ ಪತ್ತೆಯಾಗಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ. ಉದಯವಾಣಿ ಕಾಳಜಿ ಫಲಪ್ರದವಾಗಿದೆ.

ವಿಜಯಪುರ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ನರ್ಸ್ ಮೂಲಕ ಮಾರಾಟವಾಗಿದ್ದ ಶಿಶು ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಯ ಐಸಿಯು ಘಟಕದಲ್ಲಿ ಆರೈಕೆಯಲ್ಲಿದೆ.

ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಪರಿತ್ಯಕ್ತ ಗರ್ಭಿಣಿ ಮಹಿಳೆಗೆ ಅವಧಿ ಪೂರ್ವ ಹೆರಿಗೆಯಾಗಿತ್ತು. ವಿಜಯಪುರ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಆಗಸ್ಟ್ 19 ರಂದು ಜನಿಸಿತ್ತು. ಅವಧಿ ಪೂರ್ವ ಜನನವಾಗಿದ್ದರಿಂದ ಮಗುವಿನ ತೂಕ 1.6 ಮಾತ್ರವಿತ್ತು.
ಹೀಗಾಗಿ ಮಗುವಿಗೆ ತೀವ್ರ ನಿಗಾ ಘಟಕದಲ್ಲಿ ತುರ್ತು ಚಿಕಿತ್ಸೆ ಅಗತ್ಯವಿತ್ತು. ಆದರೆ ಬಾಣಂತಿ ತಾಯಿ ಆಗಸ್ಟ್ 24 ರಂದು ಮಗುವಿನ ಸಮೇತ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಳು. ಆ.26 ರಂದು ಮಗುವಿನ‌ ಮಾರಾಟವಾಗಿದ್ದು, ಸೆ.12 ಮಕ್ಕಳ ಸಹಾಯವಾಣಿ ಮೂಲಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉದಯವಾಣಿ ಶಿಶು ಮಾರಾಟ ಪ್ರಕರಣವನ್ನು ಬೆಳಕಿಗೆ ತಂದಿತ್ತು.

ಈ ವಿಷಯ ಸದನದ ಉಭಯ ಮನೆಗಳಲ್ಲಿ ಚರ್ಚೆ ನಡೆದಿತ್ತು. ಇದು ಸರ್ಕಾರ, ಜಿಲ್ಲಾಡಳಿತದ ಮೇಲೆ ಒತ್ತಡ ಹೇರಿದ್ದು, ಪ್ರಕರಣವನ್ನು ಗಂಭಿರವಾಗಿ ಪರಿಗಣಿಸುವಂತೆ ಮಾಡಿತ್ತು.

ಪರಿಣಾಮ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಆನಂದಕುಮಾರ ಪ್ರಕರಣದ ತನಿಖೆಗೆ ಮೂರು ತಂಡಗಳನ್ನು ರಚಿಸಿದ್ದರು.
ಇದೀಗ ಪೊಲೀಸ ತನಿಖಾ ತಂಡ ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಯಲ್ಲಿ ಮಗವನ್ನು ಪತ್ತೆ ಮಾಡಿದೆ.

ಮಗುವನ್ನು ಖರೀದಿಸಿದ ವ್ಯಕ್ತಿ ಜಿಲ್ಲೆಯ ಸಿಂದಗಿ ಮೂಲದ ಬಡ ಆಟೋ ಚಾಲಕ ಎಂದು ತಿಳಿದು ಬಂದಿದೆ. ತನಗಿದ್ದ ಎರಡು ಹೆಣ್ಣುಮಕ್ಕಳು ಮೃತಪಟ್ಟಿದ್ದವು. ಹೀಗಾಗಿ ನರ್ಸ್ ಮೂಲಕ ಎಂಟು ದಿನದ ನವಜಾತ ಶಿಶುವನ್ನು ಖರೀದಿಸಿದ್ದ ಎಂಬ ಅಂಶ ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ.

ಕಡಿಮೆ ತೂಕದ ಅವಧಿ ಪೂರ್ವ ಜನನದ ಮಗುವನ್ನು ಖರೀದಿಸಿದ ವ್ಯಕ್ತಿ, ಅಶಕ್ತ ಮಗುವಿನ ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ ಮಾಡದೇ ಮಗುವಿನ ಆರೈಕೆಗಾಗಿ ಹತ್ತಾರು ಸಾವಿರ ರೂ. ಖರ್ಚು ಮಾಡಿ ದೂರದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾನೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗು ಚೇತರಿಸಿಕೊಳ್ಳುತ್ತಿದೆ.

ಪ್ರಕರಣದ ಹಿನ್ನೆಲೆ :
ಹೆರಿಗೆ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿದ್ದಾಗ ಪರಿಚಯವಾಗಿದ್ದ ಕಸ್ತೂರಿ ಎಂಬ ನರ್ಸ್ ಜೊತೆ ಮಗುವಿನ ತಾಯಿ ತನ್ನ ವಯಕ್ತಿಕ ಬದುಕಿನ ಬವಣೆ ನಿವೇದಿಸಿಕೊಂಡಿದ್ದಳು.

ಪರಿತ್ಯಕ್ತಳಾದ ನನಗೆ ಈಗಾಗಲೇ ನನಗೆ ಒಂದು ಹೆಣ್ಣು ಮಗುವಿದ್ದು, ಎರಡನೇ ಮಗುವನ್ನು ಸಾಕಲಾಗದಷ್ಟು ಬಡತನವಿದೆ ಎಂದು ಸಂಕಷ್ಟ ಹೇಳಿಕೊಂಡಿದ್ದಳು.

ಇದನ್ನು ಬಂಡವಾಳ ಮಾಡಿಕೊಂಡ ನರ್ಸ್ ತನಗೆ ಮಗುವನ್ನು ನೀಡಿದರೆ ಹಣ ನೀಡುವುದಾಗಿ ಹೇಳಿದ್ದಳು. ಮನೆಯಲ್ಲಿ ವಿಚಾರಿಸಿ ಹೇಳುವುದಾಗಿ ಬಾಣಂತಿ ಬಿಜ್ಜರಗಿ ಗ್ರಾಮಕ್ಕೆ ಮರಳಿದ್ದಳು.

ಆಗಸ್ಟ್ 26 ರಂದು ವಿಜಯಪುರ ನಗರಕ್ಕೆ ಆಗಮಿಸಿದ ಮಹಿಳೆ, ಜಿಲ್ಲಾ ಆಸ್ಪತ್ರೆಗೆ ತೆರಳಿದಾಗ ಅಲ್ಲಿ ಭೇಟಿಯಾದ ನರ್ಸ್ ಮಗು ಮಾರಾಟದ ಕುರಿತು ಚರ್ಚಿಸಿದ್ದಾಳೆ. ಅಲ್ಲದೇ ತನ್ನ ಪತಿ ಹಾಗೂ ಇನ್ನೋರ್ವ ವ್ಯಕ್ತಿಯನ್ನು ಕರೆಸಿಕೊಂಡು ಬಲವಂತವಾಗಿ ತಾಯಿಯ ಕೈಗೆ 5 ಸಾವಿರ ರೂ. ಹಣ ನೀಡಿ, 8 ದಿನದ ಹಸುಗೂಸನ್ನು ಖರೀದಿಸಿದ್ದಾರೆ.

ಎರಡು ದಿನದ ಬಳಿಕ ಮತ್ತೆ ಆಸ್ಪತ್ರೆಗೆ ಆಗಮಿಸಿದ ಬಿಜ್ಜರಗಿ ಮಹಿಳೆ ತನಗೆ ತನ್ನ ಮಗು ಮರಳಿ ಬೇಕೆಂದು ಪಟ್ಟು ಹಿಡಿದಿದ್ದಳು. ಆಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ವಿಷಯ ತಿಳಿದ ಮಕ್ಕಳ ಸಹಾಯವಾಣಿ ಕಾರ್ಯಕರ್ತರು ಸೆ.12 ರಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button