ರಾಜ್ಯ

ಭೋಗ್ಯಕ್ಕೆ ನೀಡಿರುವ ಸರ್ಕಾರಿ ಭೂಮಿ ಖರೀದಿಗೆ ಅವಕಾಶ : ಸಚಿವ ಆರ್. ಅಶೋಕ್

ಬೆಂಗಳೂರು, ಸೆ.22- ವಿವಿಧ ಸಂಘ-ಸಂಸ್ಥೆಗಳಿಗೆ ಸರ್ಕಾರದಿಂದ ಭೋಗ್ಯಕ್ಕೆ ನೀಡಲಾಗಿರುವ ಸರ್ಕಾರಿ ಭೂಮಿಯನ್ನು ಆಯಾಯ ಸಂಸ್ಥೆಗಳಿಗೆ ಮಾರ್ಗಸೂಚಿ ಆಧಾರದ ಮೇಲೆ ಖರೀದಿ ಮಾಡಲು ಆವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯೆ ಭಾರತೀಶೆಟ್ಟಿ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ರಾಜ್ಯದ ಎಲ್ಲಾ ಜಿಲ್ಲೆಗಳು ಹಾಗೂ ಕೊಡಗು ಜಿಲ್ಲೆಯಲ್ಲಿ ಸ್ವಾತಂತ್ರಕ್ಕೂ ಮುನ್ನ ಗುತ್ತಿಗೆ ಆಧಾರದಲ್ಲಿ ನೀಡಲಾಗಿದ್ದ ಜಮೀನಿನ ಗುತ್ತಿಗೆ ಅವದಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅದನ್ನು ಸರ್ಕಾರದ ಜಮೀನನ್ನು ವಶಕ್ಕೆ ಪಡೆದಿದೆ.

ಬೆಳಗಾವಿ ಜಿಲ್ಲೆ ಖನಾಪುರ ಗ್ರಾಮದಲ್ಲಿ 5 ಗುಂಟೆ ಜಮೀನಿನಲ್ಲಿ 50 ವರ್ಷಗಳ ಅವದಿಗೆ ಗುತ್ತಿಗೆ ನವೀಕರಣ ಮಾಡಲಾಗಿದೆ.
ಗೋಕಾಕ್ ತಾಲೂಕಿನ ಕೊನೂರಾ ಗ್ರಾಮದಲ್ಲಿ 672 ಎಕರೆ, ಗೋಕಾಕ್ ಗ್ರಾಮದಲ್ಲಿ 312 ಎಕರೆ ಜಮೀನನ್ನು 90 ವರ್ಷಗಳ ಅವದಿಗೆ, ಗೋಕಾಕ್ ಪಾಲ್ಸ್ ಮಿಲ್‍ಗೆ ಗುತ್ತಿಗೆ ನೀಡಲಾಗಿತ್ತು.

ಅದನ್ನು 50 ವರ್ಷಗಳ ಅವದಿಗೆ ನವೀಕರಣ ಮಾಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಬ್ರಿಟಿಷರ ಅವದಿಯಲ್ಲಿ ಜಮೀನು ಭೋಗ್ಯಕ್ಕೆ ನೀಡಿರುವುದು ಕಂಡು ಬಂದಿಲ್ಲ ಎಂದರು.ಇದನ್ನು ಒಪ್ಪದ ಭಾರತೀಶೆಟ್ಟಿ ಅವರು ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಸರ್ಕಾರ ಜಮೀನನ್ನು ಕ್ರೈಸ್ತ ಮಿಷನರಿಗಳಿಗೆ ನೀಡಲಾಗಿದೆ.

ಅದರಲ್ಲಿ ಅವರು ವಾಣಿಜ್ಯಕಟ್ಟಡ ನಿರ್ಮಿಸಿಕೊಂಡು ಲಾಭ ಮಾಡಿಕೊಳ್ಳುತ್ತಿದ್ದಾರೆ. ನಗರದ ಕೇಂದ್ರ ಭಾಗದಲ್ಲಿ ಜಮೀನಿದ್ದರೂ, ಅದನ್ನು ಖಾಸಗಿಯವರಿಗೆ ಗುತ್ತಿಗೆಗೆ ನೀಡಿ ಸರ್ಕಾರ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಗ ಸ್ಪಷ್ಟನೆ ನೀಡಿದ ಕಂದಾಯ ಸಚಿವರು ಸರ್ಕಾರದಿಂದ ಗುತ್ತಿಗೆಗೆ ನೀಡಿದ ಜಮೀನು ಮರಳಿ ಸರ್ಕಾರಕ್ಕೆ ಪಡೆದ ಪ್ರಕರಣಗಳು ಬಹಳ ಕಡಿಮೆ.ಖಾಸಗಿ ಸಂಸ್ಥೆಗಳು ಅವುಗಳನ್ನು ಪದೆ ಪದೇ ನವೀಕರಣ ಮಾಡಿಕೊಳ್ಳುತ್ತಿವೆ.

ಸರ್ಕಾರಗಳೂ ನವೀಕರಣ ಮಾಡಿಕೊಡುತ್ತಿವೆ. ನೆಪ ಮಾತ್ರಕ್ಕೆ ಅದು ಸರ್ಕಾರಿ ಭೂಮಿ. ಅದರಿಂದ ಬರುವ ಆದಾಯ ತೀರಾ ಕಡಿಮೆ. ಕಳೆದ ಬಾರಿ ವಿಧೇಯಕವೊಂದನ್ನು ಅಂಗೀಕರಿಸಿದ್ದು , ಭೋಗ್ಯಕ್ಕೆ ನೀಡಿರುವಭೂಮಿಯನ್ನು ಪದೆ ಪದೇ ನವೀಕರಣ ಮಾಡುವ ಬದಲಾಗಿ ಮಾರ್ಗಸೂಚಿ ಬೆಲೆಗೆ ಆಯಾಯ ಸಂಸ್ಥೆಗಳಿಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದರು.

Related Articles

Leave a Reply

Your email address will not be published. Required fields are marked *

Back to top button