95 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಕಾಟೇರ’; ಬಾಕ್ಸ್ ಆಫೀಸ್ನಲ್ಲಿ ದರ್ಶನ್ ದಾಖಲೆ
ಡಿಸೆಂಬರ್ 29ರಂದು ಬಿಡುಗಡೆಯಾದ ‘ಕಾಟೇರ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ದರ್ಶನ್ ಅಭಿನಯದ ಈ ಸಿನಿಮಾವನ್ನು ಜನರು ಮೆಚ್ಚಿಕೊಂಡಿದ್ದಾರೆ. ರೆಟ್ರೋ ಕಹಾನಿ ಇರುವ ಈ ಸಿನಿಮಾಗೆ ಭರ್ಜರಿ ಕಲೆಕ್ಷನ್ ಆಗುತ್ತಿದೆ. 6 ದಿನಕ್ಕೆ ‘ಕಾಟೇರ’ ಸಿನಿಮಾ ಬರೋಬ್ಬರಿ 95.36 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದು ಚಿತ್ರತಂಡದ ಆಪ್ತ ಮೂಲಗಳು ಮಾಹಿತಿ ಹಂಚಿಕೊಂಡಿವೆ. ದರ್ಶನ್ ವೃತ್ತಿಜೀವನದ ಅತಿ ದೊಡ್ಡ ಸಿನಿಮಾ ಎಂಬ ಖ್ಯಾತಿಗೆ‘ಕಾಟೇರ’ ಪಾತ್ರವಾಗಿದೆ. ಇನ್ನೂ ಅನೇಕ ಕಡೆಗಳಲ್ಲಿ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ.
ಜಾತಿ ತಾರತಮ್ಯ ಮತ್ತು ರೈತರ ಸಮಸ್ಯೆಗಳ ಕುರಿತ ಕಥೆ ‘ಕಾಟೇರ’ ಸಿನಿಮಾದಲ್ಲಿ ಇದೆ. ಡೈಲಾಗ್ಗಳಿಗೆ ಪ್ರೇಕ್ಷಕರಿಂದ ಚಪ್ಪಾಳೆ ಸಿಕ್ಕಿದೆ. ಆ್ಯಕ್ಷನ್ ದೃಶ್ಯಗಳನ್ನು ಮಾಸ್ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಮಾಲಾಶ್ರೀ ಮಗಳು ಆರಾಧನಾ ರಾಮ್ ಅವರು ಈ ಸಿನಿಮಾದಲ್ಲಿ ದರ್ಶನ್ಗೆ ಜೋಡಿಯಾಗಿ ನಟಿಸಿದ್ದಾರೆ. ಅವಿನಾಶ್, ಶ್ರುತಿ, ವೈಜನಾಥ ಬೀರಾದಾರ, ಜಗಪತಿ ಬಾಬು, ವಿನೋದ್ ಆಳ್ವಾ, ಕುಮಾರ್ ಗೋವಿಂದ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
‘ಕಾಟೇರ’ ಸಿನಿಮಾ ಮೊದಲ ದಿನ 19.79 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಶನಿವಾರ (ಡಿ.30) 17.35 ಕೋಟಿ ರೂಪಾಯಿ ಬಾಚಿಕೊಂಡಿತು. ಭಾನುವಾರ (ಡಿ.31) ಬರೋಬ್ಬರಿ 20.94 ಕೋಟಿ ರೂಪಾಯಿ ಆದಾಯ ಹರಿದುಬಂತು. ಸೋಮವಾರ (ಜ.1) 18.26 ಕೋಟಿ ರೂಪಾಯಿ ಮತ್ತು ಮಂಗಳವಾರ (ಜ.2) 9.24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಬುಧವಾರ 9.78 ಕೋಟಿ ರೂಪಾಯಿ ಗಳಿಕೆ ಆಗಿದೆ. ಒಟ್ಟು ಕಲೆಕ್ಷನ್ 95.36 ಕೋಟಿ ರೂ. ಆಗಿದ್ದು, ಶೀಘ್ರದಲ್ಲೇ 100 ಕೋಟಿ ರೂಪಾಯಿ ಗಡಿ ಮುಟ್ಟಲಿದೆ.